ಪೋಕ್ಸೋ ಪ್ರಕರಣದ ಆರೋಪಿಗೆ 49 ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಪೋಕ್ಸೋ ಪ್ರಕರಣದ ಆರೋಪಿಗೆ ಹೊಸದುರ್ಗ ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶರಾದ ಪಿ.ಎಂ. ಸುರೇಶ್ ಅವರು ವಿವಿಧ ಸೆಕ್ಷನ್‌ಗಲ್ಲಾಗಿ ಒಟ್ಟು 49 ವರ್ಷ ಕಠಿಣ ಸಜೆ ಹಾಗೂ 3.60 ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಬೇಡಡ್ಕ ಪನ್ನಿಯಾಡಿಯ ಪಿ. ಗೋಪಿ (51) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

2021  ಅಕ್ಟೋಬರ್ ಮತ್ತು ಡಿಸೆಂಬರ್ ತಿಂಗಳ ಹಲವು ದಿನಗಳಲ್ಲಾಗಿ 15ರ ಹರೆಯದ ಬಾಲಕಿಗೆ ಆ ಮನೆಯಲ್ಲಿ ಯಾರೂ ಇಲ್ಲದ ಸಮಯಗಳಲ್ಲಿ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಬೇಡಗ ಪೊಲೀಸರು ಗೋಪಿ   ವಿರುದ್ಧ ಪೋಕ್ಸೋ ಕಾನೂನು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ಅಂದು ಬೇಡಗ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಟಿ. ದಾಮೋದರನ್ ಆರೋಪಿಯನ್ನು ಬಂಧಿಸಿದ್ದರು. ನಂತರ ಅಂದು ಎಸ್.ಐ. ಆಗಿದ್ದ ಎ. ಗಂಗಾಧರನ್ ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರ ಪಬ್ಲಿಕ್ ಪ್ರೋಸಿಕ್ಯೂಟರ್ ಎ. ಗಂಗಾಧರನ್ ನ್ಯಾಯಾಲಯದಲ್ಲಿ  ವಾದಿಸಿದ್ದರು. ಶಿಕ್ಷೆಯನ್ನು ಆರೋಪಿ ಒಟ್ಟಿಗೆ ಅನುಭವಿಸಿದರೆ ಸಾಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.

You cannot copy contents of this page