ಪ್ರಾಕೃತಿಕ ವಿಕೋಪಕ್ಕೆ ತಾಯಿ ಮಗ ಸೇರಿ ಮೂವರು ಬಲಿ
ಕಾಸರಗೋಡು: ರಾಜ್ಯದಲ್ಲಿ ಮಳೆ ತೀವ್ರಗೊಂಡಿದೆ. ಇದರಿಂದಾಗಿ ಸೃಷ್ಟಿಯಾದ ಪ್ರಾಕೃತಿಕ ವಿಕೋಪಕ್ಕೆ ತಾಯಿ ಮತ್ತು ಪುತ್ರ ಸೇರಿದಂತೆ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
ಪಾಲ್ಘಾಟ್ ಕೊಟ್ಟೂಕಾಟ್ ವೀಟಿಲ್ನ ಮನೆ ಗೋಡೆ ಕುಸಿದು ಬಿದ್ದು ತಾಯಿ ಮತ್ತು ಮಗ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಕೋಟೆ ಕ್ಕಾಡ್ ಕೋಟೆಕುನ್ನಿನ ಸುಲೋಚನ (53) ಮತ್ತು ಅವರ ಪುತ್ರ ರಂಜಿತ್ (32) ಸಾವನ್ನಪ್ಪಿದ ದುರ್ದೈವಿಗಳಾಗಿ ದ್ದಾರೆ. ಇಲ್ಲಿ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಆಗ ಮನೆಗೋಡೆ ಕುಸಿದು ಬಿದ್ದು ಒಳಗಿದ್ದ ತಾಯಿ ಮತ್ತು ಮಗ ಅಲ್ಲೇ ಅಸುನೀಗಿದ್ದಾರೆ. ಬೆಳಿಗ್ಗೆ ನೆರೆಮನೆಯವರು ಬಂದು ನೋಡಿದಾಗಲೇ ಮನೆ ಬಿದ್ದಿರುವುದು ಅವರ ಗಮನಕ್ಕೆ ಬಂದಿದೆ. ಗೋಡೆಯ ಅಡಿ ಭಾಗದಲ್ಲಿ ಸಿಲುಕಿಕೊಂಡ ತಾಯಿ ಮತ್ತು ಮಗನನ್ನು ಅಲ್ಲಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಇದೇ ರೀತಿ ಕಣ್ಣೂರಿನಲ್ಲಿ ಮಳೆ ನೀರಿನ ಹೊಂಡಕ್ಕೆ ಬಿದ್ದು ಮಹಿಳೆಯೋರ್ವೆ ಸಾವನ್ನಪ್ಪಿದ್ದಾರೆ. ಕಣ್ಣೂರು ಕೋಳೇರಿ ನಿವಾಸಿ ಕುಂಞಾಮಿನ (51) ಸಾವನ್ನಪ್ಪಿದ ಮಹಿಳೆ. ಇವರು ಮನೆ ಪಕ್ಕದ ಮಳೆ ನೀರು ತುಂಬಿದ ಹೊಂಡಕ್ಕೆ ಬಿದ್ದು ಅದರಿಂದ ಮೇಲಕ್ಕೇಳುವ ವೇಳೆ ಅಲ್ಲೇ ಪಕ್ಕದ ಕಟ್ಟೆಯಿಲ್ಲದ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ರಾಜ್ಯವ್ಯಾಪಕವಾಗಿ ಮಳೆ ಇನ್ನಷ್ಟು ಬಿರುಸುಗೊಳ್ಳತೊಡಗಿದೆ. ಇದರಿಂದಾಗಿ ಹೆಚ್ಚಿನ ಎಲ್ಲಾ ಅಣೆಗಟ್ಟುಗಳಲ್ಲಿ ನೀರು ತುಂಬಿತುಳುಕತೊಡಗಿದೆ. ಪೋಪಾರ ಅಣೆಕಟ್ಟಿನಲ್ಲಿ ಮಳೆ ನೀರು ಮಿತಿಮೀರತೊಡಗಿದೆ. ಇದರಿಂದ ಅದರ ಶೆಟರ್ನ ಬಾಗಿಲುಗಳನ್ನು ತೆರೆದು ನೀರು ಹೊರಬಿಡಲು ತೀರ್ಮಾನಿಸಲಾಗಿದೆ. ಪೆರಿಯಾರ್ ನದಿಯಲ್ಲೂ ನೀರು ತುಂಬಿದ್ದು, ಅದರಿಂದಾಗಿ ಅಲ್ಲಿನ ಅಣೆಕಟ್ಟಿನ ಶೆಟರ್ನ ಬಾಗಿಲು ತೆರೆದು ನೀರು ಹೊರಬಿಡುವ ಕ್ರಮ ಕೈಗೊಳ್ಳಲಾಗಿದೆ. ಆಲುವಾ ಶಿವಕ್ಷೇತ್ರ ನೀರಿನಲ್ಲಿ ಮುಳುಗಿಹೋಗಿದೆ. ಆ ಪರಿಸರದಲ್ಲಿ ಭಾರೀ ಮಳೆಗೆ ಮರಗಳು ಕುಸಿದುಬಿದ್ದು, ವ್ಯಾಪಕ ನಾಶನಷ್ಟ ಉಂಟಾಗಿದೆ. ಕೋಟ್ಟಯಂ ಕುಮ್ಮನಂ ದೇವಸ್ಥಾನ ಪರಿಸರದಲ್ಲೂ ಮರಗಳು ಧರೆಗುರುಳಿ ವ್ಯಾಪಕ ನಾಶನಷ್ಟ ಉಂಟಾಗಿದೆ.
ಮಳೆ ಇನ್ನಷ್ಟು ತೀವ್ರಗೊಳ್ಳಲಿರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಭಾರೀ ಜಾಗ್ರತಾ ನಿರ್ದೇಶ ನೀಡಲಾಗಿದೆ. ತುರ್ತು ಸೇವೆಗಾಗಿ ವಿಪತ್ತು ನಿರ್ವಹ ಣಾ ಪಡೆಗಳನ್ನು ಎಲ್ಲೆಡೆಗಳಲ್ಲೂ ಸಿದ್ಧಪಡಿಸಿ ನಿಲ್ಲಿಸಲಾಗಿದೆ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಕಾಸರಗೋಡು, ಕಣ್ಣೂರು, ವಯನಾಡು, ಕಲ್ಲಿಕೋಟೆ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಇಂದು ಕೇಂದ್ರ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಇತರ ಜಿಲ್ಲೆಗಳಲ್ಲೂ ಇಂದು ಯೆಲ್ಲೋ ಅಲರ್ಟ್ ಘೋಷಿಸಿದೆ.