ಬಂದ್ಯೋಡಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ಪ್ರಕರಣ: ಮಾಹಿತಿಯಿದ್ದವರು ಪೊಲೀಸ್ ಠಾಣೆಗೆ ಸಂಪರ್ಕಿಸಲು ಕರೆ
ಕುಂಬಳೆ: ಬಂದ್ಯೋಡಿನಲ್ಲಿ ಇತ್ತೀಚೆಗೆ ಅಪರಿಚಿತ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾದ ಘಟನೆಗೆ ಸಂಬಂಧಿಸಿ ತನಿಖೆ ನಡೆಯುತ್ತಿದೆಯೆಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ. ಬಂದ್ಯೋಡಿನ ಹಳೆಯ ಸರ್ವೀಸ್ ಸ್ಟೇಶನ್‌ನ ಕಟ್ಟಡದಲ್ಲಿ ಈ ತಿಂಗಳ 14ರಂದು ಸಂಜೆ ಮೃತದೇಹ ಪತ್ತೆಯಾಗಿತ್ತು. ಸುಮಾರು 50 ವರ್ಷ ಪ್ರಾಯದ ಪುರುಷನ ಮೃತದೇಹ ಪತ್ತೆಯಾಗಿದ್ದು, ಆದರೆ ಇದುವರೆಗೆ ನಡೆಸಿದ ತನಿಖೆಯಲ್ಲಿ ಮೃತ ವ್ಯಕ್ತಿಯ ಗುರುತು ಹಚ್ಚಲಾಗಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೊಲೀಸರ ನೇತೃತ್ವದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಇದೇ ವೇಳೆ ಮೃತದೇಹ ಪತ್ತೆಯಾದ ಕಟ್ಟಡದ ಸಮೀಪದ ಸಿಸಿ ಕ್ಯಾಮರಾವನ್ನು ಪೊಲೀಸರು ಪರಿಶೀಲಿಸಿದಾಗ ವ್ಯಕ್ತಿಯೊಬ್ಬರು ಆ ಪರಿಸರದಲ್ಲಿ ನಡೆದು ಹೋಗುತ್ತಿರುವುದು ಕಂಡುಬಂದಿದೆ. ದೃಶ್ಯದಲ್ಲಿ ಕಾಣುವ ವ್ಯಕ್ತಿಗಾಗಿ ಪೊಲೀಸರು ಶೋಧ ನಡೆಸಿದರೂ ಪತ್ತೆಹಚ್ಚಲಾಗಲಿಲ್ಲ. ಆದ್ದರಿಂದ ಚಿತ್ರದಲ್ಲಿ ಕಾಣುವ ವ್ಯಕ್ತಿಯ ಕುರಿತು ಮಾಹಿತಿಯಿದ್ದವರು ಕುಂಬಳೆ ಪೊಲೀಸ್ ಠಾಣೆಯನ್ನು (ಫೋನ್: 04998-213037) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.