ಬದಿಯಡ್ಕದ ಠೇವಣಿ ವಂಚನೆ ತಂಡ ಕುಂಬಳೆಯಲ್ಲೂ ವಂಚನೆ ನಡೆಸಿರುವುದಾಗಿ ದೂರು
ಕುಂಬಳೆ: ಭಾರೀ ಬಡ್ಡಿಯ ಭರವಸೆಯೊಡ್ಡಿ ಠೇವಣಿದಾರರಿಂದ ಸಂಗ್ರಹಿಸಿದ ಕೋಟ್ಯಂತರ ರೂಪಾಯಿಗಳನ್ನು ಲಪಟಾಯಿಸಿ ತಲೆಮರೆಸಿಕೊಂಡ ಬದಿಯಡ್ಕದ ರೋಯಲ್ ಟ್ರಾವಂಕೂರ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪೆನಿ ಲಿಮಿಟೆಡ್‌ನ ಕುಂಬಳೆ ಶಾಖಾ ನೌಕರರಾದ ಐದು ಮಂದಿ ಯುವತಿಯರು ವಂಚನೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ.ಶ್ರುತಿ, ಸಫ್ನ, ಅರ್ಪಿತ ವಿ.ಪೈ, ರಮ್ಯ, ಸುಶ್ಮಿತ ಎಂಬಿವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಪ್ರತಿಯನ್ನು ಕುಂಬಳೆಯ ಸಂಸ್ಥೆಯ ಗೋಡೆಯಲ್ಲಿ ಇವರು ಅಂಟಿಸಿದ್ದಾರೆ.
೬ ತಿಂಗಳ ಹಿಂದೆ ಕುಂಬಳೆಯಲ್ಲಿ ಕಾರ್ಯಾರಂಭಿಸಿದ ಸಂಸ್ಥೆ ೪೦ ಲಕ್ಷಕ್ಕೂ ಹೆಚ್ಚು ರೂಪಾಯಿಗಳನ್ನು ಬಡ ಜನರಿಂದ ಠೇವಣಿಯಾಗಿ ಸಂಗ್ರಹಿಸಿದೆ. ಠೇವಣಿ ಸಂಗ್ರಹಿಸಿದ್ದ ಮೂವರು ಪುರುಷ ಏಜೆಂಟರು ತಲೆಮರೆಸಿಕೊಂಡಿರುವುದಾಗಿ ಇವರು ತಿಳಿಸಿದ್ದಾರೆ. ಸಂಸ್ಥೆ ತೆರೆಯದಿರುವುದರಿಂದ ಠೇವಣಿದಾರರು ತಮ್ಮ ಮನೆಗಳಿಗೆ ತಲುಪತೊಡಗಿದ್ದಾರೆಂದು ಇವರು ಪೊಲೀಸರಿಗೆ ತಿಳಿಸಿದ್ದಾರೆ.