ಬಸ್‌ಗಳಲ್ಲಿ ಚಾಲಕರ ಮೇಲೆ ನಿಗಾ ಇರಿಸಲು ಕ್ಯಾಮರಾ: ನಾಳೆಯ ಸಭೆಯಲ್ಲಿ ಪರಿಗಣನೆ

ತಿರುವನಂತಪುರ: ರಾಜ್ಯದಲ್ಲಿ ಖಾಸಗಿ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಚಾಲಕರ ಮೇಲೆ ನಿಗಾ ಇರಿಸಲು ಕ್ಯಾಮರಾ ಅಳವಡಿಸುವ ಬಗ್ಗೆ ಸರಕಾರ ಪರಿಗಣಿಸುತ್ತಿದೆ. ಈ ಬಗ್ಗೆ ನಾಳೆ ನಡೆಯುವ ರಾಜ್ಯ ಸಾರಿಗೆ ಅಥಾರಿಟಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಚಾಲಕರು ನಿದ್ದೆಯ ಮಂಪರಿನಲ್ಲಿ ಬಸ್ ಚಲಾಯಿಸುವುದರಿಂದ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ನಿರ್ಲಕ್ಷ್ಯವಾಗಿ ಡ್ರೈವಿಂಗ್, ಮೊಬೈಲ್ ಪೋನ್ ಬಳಕೆ ಮೊದಲಾದವುಗಳನ್ನು ಕ್ಯಾಮರಾ  ಅಳವಡಿಸಿದಲ್ಲಿ ಪತ್ತೆಹಚ್ಚಲು ಸಾಧ್ಯವಿದೆ ಎಂದು ಅಂದಾಜಿಸಲಾಗಿದೆ. ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಲು ಮೋಟಾರ್ ವಾಹನ ಇಲಾಖೆ ಅಧಿಕಾರಿಗಳಿಗೆ ಅಧಿಕಾರವಿರುವುದು. ಬಸ್‌ಗಳಲ್ಲಿ ಐದು ಕ್ಯಾಮರಾಗಳನ್ನು ಅಳವಡಿಸಬೇಕೆಂಬ ವ್ಯವಸ್ಥೆಯಿದೆ. ಬಸ್‌ನ ಮುಂಭಾಗ ಹಿಂಭಾಗ ಹಾಗೂ ಒಳ ಭಾಗದಲ್ಲಿ ಕ್ಯಾಮರಾ ಕಡ್ಡಾಯಗೊಳಿಸಲಾಗಿದೆ. ಇದರ ಹೊರತು ಎರಡು ಫುಟ್ ಬೋರ್ಡ್‌ಗಳಲ್ಲೂ ಕ್ಯಾಮರಾ ಅಳವಡಿಸಲು ನಿರ್ಧರಿಸಲಾಗಿದೆ.

You cannot copy contents of this page