ಬಿಎಂಎಸ್ ನೇತಾರ ನ್ಯಾಯವಾದಿ ಪಿ. ಸುಹಾಸ್ ಕೊಲೆ ಪ್ರಕರಣ : ಸ್ಟೇಟ್ ಕ್ರೈಮ್ ಬ್ರಾಂಚ್ನಿಂದ ಮರು ತನಿಖೆ ಆರಂಭ
ಕಾಸರಗೋಡು: 2008 ಎಪ್ರಿಲ್ 17ರಂದು ಸಂಜೆ ನಗರದ ಕೋಟೆ ರಸ್ತೆ ಬಳಿ ಇರುವ ವಕೀಲ ಕಚೇರಿಯ ಪರಿಸರದಲ್ಲಿ ಕಾಸರಗೋಡಿನ ಖ್ಯಾತ ನ್ಯಾಯವಾದಿ ಹಾಗೂ ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷರೂ ಆಗಿದ್ದ ಪಿ. ಸುಹಾಸ್ (38)ರನ್ನು ಕೊಲೆಗೈದ ಪ್ರಕರಣದ ಮರು ತನಿಖೆ ಆರಂಭಗೊಂಡಿದೆ.
ಸ್ಟೇಟ್ ಕ್ರೈಮ್ ಬ್ರಾಂಚ್ ಡಿವೈಎಸ್ಪಿ ಪಿ. ಮಧುಸೂದನನ್ ನಾಯರ್ರ ನೇತೃತ್ವದಲ್ಲಿ ಮರು ತನಿಖೆ ಆರಂಭಗೊಂಡಿದೆ. ತಲಶ್ಶೇರಿ ಸೆಶನ್ಸ್ ಜಡ್ಜ್ ಕೆ.ಟಿ. ನಾಸರ್ ಅಹಮ್ಮದ್ ಅವರು ಮರು ತನಿಖೆಗೆ ಎರಡು ದಿನಗಳ ಹಿಂದೆ ಅನುಮತಿ ನೀಡಿದ್ದರು.
2008 ಎಪ್ರಿಲ್ನಲ್ಲಿ ಭುಗಿಲೆದ್ದ ಮತೀಯ ಗಲಭೆಯಲ್ಲಿ ಒಟ್ಟು ನಾಲ್ಕು ಮಂದಿ ಕೊಲೆಗೈಯ್ಯಲ್ಪಟ್ಟಿದ್ದರು. ಅದರಲ್ಲಿ ಕಾಸರಗೋಡು ತಾಲೂಕು ಆಫೀಸ್ ಪರಿಸರ ನಿವಾಸಿಯಾಗಿದ್ದ ನ್ಯಾಯವಾದಿ ಸುಹಾಸ್ರನ್ನು ಎಪ್ರಿಲ್ 17ರಂದು ಮಾರಕ ಆಯುಧಗಳಿಂದ ಎರಗಿ ಯದ್ವಾತದ್ವ ಇರಿದು ಬರ್ಭರವಾಗಿ ಕೊಲೆಗೈಯ್ಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂದಿಸಿ ಆರು ಮಂದಿ ಆರೋಪಿಗಳನ್ನು ತನಿಖಾ ತಂಡ ಈ ಹಿಂದೆ ಬಂಧಿಸಿ ಅವರ ವಿರುದ್ಧ ನ್ಯಾಯಾಲಯದಲ್ಲಿ ಚಾರ್ಜ್ಶೀಟನ್ನೂ ಸಲ್ಲಿಸಿತ್ತು. ಅದರಲ್ಲಿ ೭ನೇ ಆರೋಪಿಯ ಬಗ್ಗೆಯೂ ಪ್ರಸ್ತಾಪ ನಡೆಸಲಾಗಿತ್ತು. ಮಾತ್ರವಲ್ಲ ೭ನೇ ಆರೋಪಿಯನ್ನು ಪತ್ತೆಹಚ್ಚಲು ಸಾಧ್ಯವಾಗಲಿದೆ ಎಂದು ಅದರಲ್ಲಿ ತಿಳಿಸಲಾಗಿತ್ತು. ಪ್ರಸ್ತುತ ಆರೋಪಿಯನ್ನು ಗುರುತುಹಚ್ಚಲು ಸಾಧ್ಯವಾಗಿದೆ ಎಂದೂ, ಅದರಿಂದ ಈ ಪ್ರಕರಣದ ಬಗ್ಗೆ ಮರು ತನಿಖೆ ನಡೆಸಬೇಕೆಂದು ಆಗ್ರಹಿಸಿ ಸ್ಟೇಟ್ ಕ್ರೈಮ್ ಬ್ರಾಂಚ್ ವಿಚಾರಣಾ ನ್ಯಾಯಾಲಯವಾದ ತಲಶ್ಶೇರಿ ಸೆಶನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ ಗುರುತಿಸಲ್ಪಟ್ಟ ೭ನೇ ಆರೋಪಿಯ ಬಗ್ಗೆ ತನಿಖಾ ತಂಡ ಈ ತನಕ ಮಾಹಿತಿ ಬಹಿರಂಗಪಡಿ ಸಿಲ್ಲ. ಈ ಹಿಂದೆ ಬಂಧಿಸಲಾದ ಈ ಪ್ರಕರಣದ ಆರು ಆರೋಪಿಗಳಿಂದ ಲಭಿಸಿದ ಮಾಹಿತಿಯಿಂದ ೭ನೇ ಆರೋಪಿಯನ್ನು ಗುರತುಹಚ್ಚಲು ಸಾಧ್ಯವಾಗಿದೆ. ಆತನ ಪತ್ತೆಗಾಗಿ ಕ್ರೈಮ್ ಬ್ರಾಂಚ್ ತೀವ್ರ ಶೋಧ ಆರಂಭಿಸಿದೆ.