ಬಿದ್ದರೆ ಅಪಾಯ: ಎಚ್ಚೆತ್ತರೆ ತಪ್ಪಿಸಬಹುದು; ಆದೂರಿನಲ್ಲಿ ವಿದ್ಯುತ್ ಕಂಬ ಧರಾಶಾಯಿ ಸಾಧ್ಯತೆ

ಮುಳ್ಳೇರಿಯ: ಆದೂರಿನಲ್ಲಿ ವಿದ್ಯುತ್ ಕಂಬವೊಂದು ಅಪಾಯವನ್ನು ಕೈಬೀಸಿ ಆಹ್ವಾನಿಸುತ್ತಿದ್ದರೂ, ಅಧಿಕಾರಿಗಳು ಮೌನ ವಹಿಸಿದ್ದಾರೆಂದು ಸ್ಥಳೀಯರು ದೂರಿದ್ದಾರೆ. ನಿತ್ಯ ಜನಜಂಗುಳಿಯಿಂದ ಕೂಡಿದ ಆದೂರು ಬಸ್ ತಂಗುದಾಣದ ಬಳಿಯಲ್ಲೇ ಇರುವ ಈ ವಿದ್ಯುತ್ ಕಂಬ ಯಾವುದೇ ಕ್ಷಣ ಧರಾಶಾಯಿಯಾಗುವ ಸ್ಥಿತಿ ಇದೆ. ಮುಳ್ಳೇರಿಯದಿಂದ ಪಡ್ಯತ್ತಡ್ಕವರೆಗೆ ರಸ್ತೆ ಅಭಿವೃದ್ಧಿಯಾಗುತ್ತಿದ್ದು, ಈ ವೇಳೆ ರಸ್ತೆ ಬದಿ ನೀರು  ಹರಿದು ಹೋಗಲು ತಾತ್ಕಾಲಿಕ ಚರಂಡಿ ನಿರ್ಮಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಸುರಿದ  ಮಳೆಗೆ ನೀರೆಲ್ಲ ಹರಿದು ವಿದ್ಯುತ್ ಕಂಬದ ಬುಡದ ಮಣ್ಣು ನೀರಿನೊಂದಿಗೆ ಹೋಗಿದೆ. ಹಳೆಯ ವಿದ್ಯುತ್ ಕಂಬವನ್ನು ಬದಲಿಸಲು ಹೊಸತು ಸ್ಥಾಪಿಸಲಾಗಿದ್ದು, ಆ ಕಂಬವೂ ಹಳೆಯ ತಂತಿಗೆ ತಾಗಿಕೊಂಡು ಅದರ ಆಧಾರದಿಂದ ನಿಂತಿದೆ. ಆದರೆ ಯಾವುದೇ ಕ್ಷಣ ಸಣ್ಣ ಗಾಳಿಗೂ ಬೀಳುವ ಸಾಧ್ಯತೆ ಇದೆ ಎಂದು ಇಲ್ಲಿನವರು ತಿಳಿಸುತ್ತಾರೆ.

ರಸ್ತೆ ಅಭಿವೃದ್ಧಿ ವೇಳೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಬದಲಿಸಲು ಗುತ್ತಿಗೆ ನೀಡಲಾಗಿತ್ತೆನ್ನಲಾಗಿದೆ. ಆದರೆ ಗುತ್ತಿಗೆ ಪಡೆದುಕೊಂಡವರು ಅದನ್ನು ಸೂಕ್ತ ಸಮಯದಲ್ಲಿ ನಿರ್ವಹಿಸದೆ ಇರುವುದೇ ಇದಕ್ಕೆ ಕಾರಣವೆನ್ನಲಾಗಿದೆ. ಈ  ಕಂಬ ಮಾತ್ರವಲ್ಲದೆ ಈ ಪರಿಸರದ ಇತರ ವಿದ್ಯುತ್ ಕಂಬಗಳು ಕೂಡಾ ಅಪಾಯ ಆಹ್ವಾನಿಸುತ್ತಿವೆ. ಮರ, ಮರದ ಗೆಲ್ಲುಗಳು ತಾಗಿಕೊಂಡಿದ್ದು, ತೆರವುಗೊಳಿಸಲು ಕ್ರಮ ಉಂಟಾಗಿಲ್ಲ. ವಿದ್ಯುತ್ ಕಂಬ ಬಿದ್ದು ದುರಂತ ಸಂಭವಿಸುವ ಮುಂಚಿತ ಅಧಿಕಾರಿವರ್ಗ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಕೆಎಸ್‌ಇಬಿಯ ಅಧಿಕೃತ ವಾಟ್ಸಪ್ ಗ್ರೂಪಲ್ಲೂ ಈ ವಿಷಯ ಚರ್ಚೆಯಾಗುತ್ತಿದ್ದು, ಪರಿಗಣಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರೂ ಕ್ರಮಕ್ಕೆ ವಿಳಂಬವಾಗುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ.

RELATED NEWS

You cannot copy contents of this page