ಬಿದ್ದು ಸಿಕ್ಕಿದ ಚಿನ್ನದ ಸರ ವಾರಸುದಾರರಿಗೆ ಹಸ್ತಾಂತರ: ಮಹಿಳೆಯ ಪ್ರಾಮಾಣಿಕತೆಗೆ ಮೆಚ್ಚುಗೆ
ಕುಂಬಳೆ: ಪೇಟೆಯಲ್ಲಿ ಬಿದ್ದು ಸಿಕ್ಕಿದ ಒಂದೂವರೆ ಪವನ್ ತೂಕದ ಚಿನ್ನದ ಸರವನ್ನು ಅದರ ವಾರಸುದಾರರಿಗೆ ಹಸ್ತಾಂತರಿಸಿ ಮಹಿಳೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪೇರಾಲ್ ಕಣ್ಣೂರಿನ ಮುಜೀದ್‌ರ ಪತ್ನಿ ಆಯಿಶಾ ಮೆಚ್ಚುಗೆಗೆ ಪಾತ್ರರಾದ ಮಹಿಳೆಯಾಗಿದ್ದಾರೆ. ಈ ತಿಂಗಳ ೧ರಂದು ಮಧ್ಯಾಹ್ನ ಕುಂಬಳೆ ಪೇಟೆಯ ಮೀನು ಮಾರುಕಟ್ಟೆ ಬಳಿ ಆಯಿಶಾರಿಗೆ ಒಂದೂವರೆ ಪವನ್‌ನ ಚಿನ್ನದ ಸರ ಬಿದ್ದು ಸಿಕ್ಕಿತ್ತು. ಅದನ್ನು ಅವರು ಕುಂಬಳೆ ಪೊಲೀಸ್ ಠಾಣೆಗೆ ತಲುಪಿಸಿದ್ದರು. ಆದರೆ ಅದರ ವಾರಸುದಾರರು ಯಾರೂ ಬಂದಿರ ಲಿಲ್ಲ. ಈ ಹಿನ್ನೆಲೆಯಲ್ಲಿ ಸರ ಬಿದ್ದು ಸಿಕ್ಕಿದ ಬಗ್ಗೆ ವಿಷಯ ವಾಟ್ಸಪ್ ಗ್ರೂಪ್‌ಗಳಲ್ಲಿ ಮಾಹಿತಿ ನೀಡಲಾ ಯಿತು. ಈ ವೇಳೆ ಚಿನ್ನದ ಸರ ಮೊಗ್ರಾಲ್ ಕೊಪ್ಪಳದ ನೌಶಾದ್‌ರ ಪತ್ನಿ ಮುಬೀನರದ್ದೆಂದು ತಿಳಿದು ಬಂದಿದೆ.
ಇದರಂತೆ ಮುಬೀನ ಆಯಿಶಾ ರನ್ನು ಸಂಪರ್ಕಿಸಿದ್ದರು. ಬಳಿಕ ಮುಬೀನರನ್ನು ನಿನ್ನೆ ಕುಂಬಳೆ ಠಾಣೆಗೆ ಕರೆಸಿ ಪೊಲೀಸರ ಉಪಸ್ಥಿತಿಯಲ್ಲಿ ಸರವನ್ನು ಹಸ್ತಾಂತರಿಸಲಾಯಿತು. ಆಯಿಶರ ಪ್ರಾಮಾಣಿಕತೆಗೆ ಪೊಲೀಸರು ಸಹಿತ ಸರ್ವರು ಮೆಚ್ಚುಗೆ ವ್ಯಕ್ತಪಡಿಸಿದರು.