ಬೀದಿ ವ್ಯಾಪಾರಿಗಳ ಪುನರ್ವಸತಿಗಾಗಿರುವ ಸ್ಟ್ರೀಟ್ ವೆಂಡರ್ಸ್ ಮಾರ್ಕೆಟ್ ಉದ್ಘಾಟನೆ ಇಂದು
ಕಾಸರಗೋಡು: ಬೀದಿ ವ್ಯಾಪಾರಿಗಳ ಪುನರ್ವಸತಿಗಾಗಿ ಕಾಸರಗೋಡು ನಗರ ಸಭೆ 28 ಲಕ್ಷ ರೂ. ವ್ಯಯಿಸಿ ನಗರದ ಹೊಸ ಬಸ್ ನಿಲ್ದಾಣ ಆವರಣದೊಳಗಾಗಿ ‘ಸ್ಟ್ರೀಟ್ ವೆಂಡರ್ಸ್ ಮಾರ್ಕೆಟ್’ ಎಂಬ ಹೆಸರಲ್ಲಿ ನಿರ್ಮಿಸಲಾಗಿರುವ ಕೇಂದ್ರವನ್ನು ಇಂದು ಸಂಜೆ ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸುವರು. ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಅಧ್ಯಕ್ಷತೆ ವಹಿಸುವರು.
ನಗರದ ಎಂ.ಜಿ ರಸ್ತೆಯ ಜನರಲ್ ಆಸ್ಪತ್ರೆ ಪರಿಸರದಿಂದ ಆರಂಭಗೊಂಡು ಮಾರ್ಕೆಟ್ ಜಂಕ್ಷನ್ ತನಕದ ರಸ್ತೆ ಬದಿಗಳಲ್ಲಿ ವ್ಯಾಪಾರ ನಡೆಸುತ್ತಿರುವ 28 ಬೀದಿ ವ್ಯಾಪಾರಿಗಳು ಹಾಗೂ ಐದು ಲಾಟರಿ ಸ್ಟಾಲ್ ನಡೆಸುವವರ ಪುನರ್ವಸತಿಗಾಗಿ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಈ ಸ್ಟ್ರೀಟ್ ವೆಂಡರ್ಸ್ ಮಾರ್ಕೆಟ್ ನಿರ್ಮಿಸಲಾಗಿದೆ. ಇದರ ನಿರ್ಮಾಣ ಕೆಲಸ ವರ್ಷಗಳ ಹಿಂದೆ ಪೂರ್ಣಗೊಂಡಿದ್ದರೂ ಅದನ್ನು ಸಕಾಲದಲ್ಲಿ ಬೀದಿ ಕಾರ್ಮಿಕರ ವ್ಯಾಪಾರಕ್ಕಾಗಿ ಬಿಟ್ಟುಕೊಟ್ಟಿರಲಿಲ್ಲ. ಅದನ್ನು ಸದುಪಯೋಗಪಡಿಸಿಕೊಂಡು ಈ ಕೇಂದ್ರವನ್ನು ರಾತ್ರಿ ವೇಳೆಗಳಲ್ಲಿ ಸಮಾಜಘಾತಕರು ತಮ್ಮ ವ್ಯವಹಾರ ಕೇಂದ್ರವನ್ನಾಗಿ ಮಾರ್ಪಡಿಸಿಕೊಂ ಡಿದ್ದರು. ಅದಕ್ಕೆ ಇಂದು ಮುಕ್ತಿ ಲಭಿಸಲಿದೆ. ಇದರ ನಿರ್ಮಾಣ ಕೆಲಸವನ್ನು 2022 ಡಿಸೆಂಬರ್‌ನಲ್ಲಿ ಆರಂಭಿಸಲಾಗಿತ್ತು. ಆದರೆ ಬಸ್ ನಿಲ್ದಾಣದೊಳಗೆ ಈ ಕೇಂದ್ರ ನಿರ್ಮಿಸಿದಲ್ಲಿ ಅದು ಬಸ್ ನಿಲ್ದಾಣಕ್ಕೆ ಸ್ಥಳದ ಕೊರತೆ ಉಂಟಾಗಬಹುದೆಂದೂ, ಮಾತ್ರವಲ್ಲ ಬಸ್‌ಗಳ ನಿಲುಗಡೆಗೆ ಅಡಚಣೆ ಸೃಷ್ಟಿಸಲಿದೆ ಎಂಬ ಕಾರಣ ನೀಡಿ ಅದಕ್ಕೆ ಬಸ್ ಮಾಲಕರು ಮತ್ತು ಕಾರ್ಮಿಕರು ಪ್ರತಿಭಟನೆ ವ್ಯಕ್ತಪಡಿಸಿದರು. ಅದರಿಂದಾಗಿ ಅಲ್ಲಿ ಬೀದಿ ಕಾರ್ಮಿಕರಿಗಾಗಿ ಒಟ್ಟು ೬೦ ಸ್ಟಾಲ್‌ಗಳನ್ನು ನಿರ್ಮಿಸುವ ಯೋಜನೆಯನ್ನು ನಗರಸಭೆ ನಂತರ ಸೀಮಿತಗೊಳಿಸಿ ಆ ಸಂಖ್ಯೆಯನ್ನು ನಂತರ 33ಕ್ಕೆ ಇಳಿಸಿತ್ತು. ಆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿತ್ತು. ಇಲ್ಲಿ ನಿರ್ಮಿಸಲಾದ ಪ್ರತಿ ಸ್ಟಾಲ್‌ಗಳು 29 ಸ್ಕ್ವಾರ್ ಫೀಟ್ ವಿಸ್ತೀರ್ಣ ಹೊಂದಿದೆ. ಇನ್ನು ಎಂ.ಜಿ ರಸ್ತೆ ಬದಿ ವ್ಯಾಪಾರ ನಡೆಸುತ್ತಿರುವ ಬೀದಿ ವ್ಯಾಪಾರಿಗಳನ್ನು ಈ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು. ಆ ಮೂಲಕ ಎಂಜಿ ರಸ್ತೆಯಲ್ಲಿ ಈಗ ತಲೆದೋರಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯತ್ನ ನಡೆಸಲಾಗಿದೆ.