ಬೆದ್ರಂಪಳ್ಳ, ಎಣ್ಮಕಜೆ ನಿವಾಸಿಗಳಿಗೆ ಉದ್ಯೋಗ ಭರವಸೆಯೊಡ್ಡಿ ಲಕ್ಷಾಂತರ ರೂ. ಪಡೆದು ವಂಚನೆ: ಸಚಿತಾ ರೈ ವಿರುದ್ಧ ಮತ್ತೆರಡು ಕೇಸು ದಾಖಲು

ಬದಿಯಡ್ಕ: ಸರಕಾರಿ ಉದ್ಯೋಗ ದೊರಕಿಸಿಕೊಡುವುದಾಗಿ ಭರವಸೆ ಯೊಡ್ಡಿ ಲಕ್ಷಾಂತರ ರೂಪಾಯಿ ಪಡೆದು ಹಲವು ಮಂದಿಗೆ ವಂಚಿಸಿದ ಆರೋಪದಂತೆ ಶೇಣಿ ಬಲ್ತಕಲ್ಲುವಿನ ಸಚಿತಾ ರೈ (27) ವಿರುದ್ಧ ಮತ್ತೆರಡು ಕೇಸುಗಳನ್ನು ದಾಖಲಿಸಲಾಗಿದೆ.

ಪೆರ್ಲ ಬೆದ್ರಂಪಳ್ಳದ ಸಂದೀಪ್‌ (28), ಎಣ್ಮಕಜೆಯ ನಯನಕುಮಾರಿ (24) ಎಂಬಿವರು ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಕರ್ನಾಟಕದ ಲೋಕೋಪಯೋಗಿ ಇಲಾಖೆಯ ನೀರಾವರಿ ವಿಭಾಗ ಅಥವಾ ಪೆಟ್ರೋ ಲಿಯಂ ಕಂಪೆನಿಯಲ್ಲಿ ಕೆಲಸ ದೊರಕಿಸುವುದಾಗಿ ತಿಳಿಸಿ ಬೆದ್ರಂಪಳ್ಳದ ಸಂದೀಪ್‌ರಿಂದ 12,83,500 ರೂಪಾಯಿ ಸಚಿತಾ ರೈ ಪಡೆದುಕೊಂಡಿರುವುದಾಗಿ ದೂರಲಾಗಿದೆ. 2022 ಮೇ 18ರ ಬಳಿಕ ಹಲವು ಬಾರಿಯಾಗಿ ಈ ಮೊತ್ತ ನೀಡಿರುವುದಾಗಿ ತಿಳಿಸಲಾಗಿದೆ.

ಅದೇ ರೀತಿ ಕರ್ನಾಟಕದ ಫುಡ್ ಕಾರ್ಪರೇಶನ್ ಆಫ್ ಇಂಡಿಯಾದ ಸಂಸ್ಥೆಯಲ್ಲಿ ಉದ್ಯೋಗ ದೊರಕಿಸಿಕೊ ಡುವುದಾಗಿ ತಿಳಿಸಿ ಎಣ್ಮಕಜೆಯ ನಯನ ಕುಮಾರಿಯ ಕೈಯಿಂದ 13,90,000 ರೂಪಾಯಿ ಸಚಿತಾ ರೈ ಪಡೆದುಕೊಂಡಿರುವುದಾಗಿ ದೂರಲಾಗಿದೆ. 2022 ಮೇ 4ರ ಬಳಿಕ ಹಲವು ಬಾರಿಯಾಗಿ ಈ ಮೊತ್ತವನ್ನು ಸಚಿತಾ ರೈಗೆ ನೀಡಿರುವುದಾಗಿ ನಯನ ಕುಮಾರಿ ಆರೋಪಿಸಿದ್ದಾರೆ.

ಉದ್ಯೋಗ ಭರವಸೆಯೊಡ್ಡಿ ಈ ರೀತಿಯಲ್ಲಿ ವಂಚಿಸಿದ ಆರೋಪದಂತೆ ಸಚಿತಾ ರೈ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಾಗಿ ದಾಖಲಿಸಿಕೊಂಡ ಪ್ರಕರಣಗಳ ಸಂಖ್ಯೆ ೧೫ಕ್ಕೇರಿದೆ. ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸೆರೆಗೀಡಾದ ಸಚಿತಾ ರೈ ಈಗ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ರಿಮಾಂಡ್‌ನಲ್ಲಿದ್ದಾಳೆ. ಡಿವೈಎಫ್‌ಐ ಮಾಜಿ ನೇತಾರೆಯೂ ಆಗಿರುವ ಸಚಿತಾ ರೈ ಅಧ್ಯಾಪಿಕೆ ಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

You cannot copy contents of this page