ಬೆದ್ರಂಪಳ್ಳದ ಅಧ್ಯಾಪಕನ ಮನೆಯಿಂದ ಮತ್ತೆ ಕಳವಿಗೆ ಯತ್ನ: ಆರೋಪಿಗಳ ದೃಶ್ಯ ಸಿಸಿ ಟಿವಿಯಲ್ಲಿ ಪತ್ತೆ
ಪೆರ್ಲ: ಕಾಸರಗೋಡು ಜಿಎಚ್ಎಸ್ಎಸ್ನ ಅಧ್ಯಾಪಕ, ಬೆದ್ರಂಪಳ್ಳದ ಅಬ್ದುಲ್ ರಹಿಮಾನ್ ಎಂಬವರ ಮನೆಯಲ್ಲಿ ಮತ್ತೆ ಕಳವಿಗೆ ಯತ್ನ ನಡೆದಿದ್ದು, ಕಳ್ಳರ ದೃಶ್ಯಗಳು ಅಲ್ಲೇ ಪಕ್ಕದ ಮನೆಯೊಂದರ ಸಿಸಿ ಟಿವಿ ಕ್ಯಾಮರಾದಲ್ಲಿ ಗೋಚರಿಸಿದೆ. ಬದಿಯಡ್ಕ ಪೊಲೀಸರು ಅದನ್ನು ವಶಪಡಿಸಿಕೊಂಡು ಅದರ ಜಾಡು ಹಿಡಿದು ಕಳ್ಳರ ಪತ್ತೆಗಾಗಿರುವ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಸಿಸಿ ಟಿವಿಯಲ್ಲಿ ಮೂವರ ದೃಶ್ಯಗಳು ಗೋಚರಿಸಿವೆ. ಅವರು ಮುಖವಾಡ ಧರಿಸಿಕೊಂಡಿದ್ದರು.
ನಿನ್ನೆ ರಾತ್ರಿ ೧.೪೨ಕ್ಕೆ ಈ ಕಳ್ಳರು ಬಂದು ಬಳಿಕ ೧.೫೩ಕ್ಕೆ ಹಿಂತಿರುಗುವ ದೃಶ್ಯವೂ ಅದರಲ್ಲಿ ಪತ್ತೆಯಾಗಿದೆ. ಮನೆಯ ಎದುರುಗಡೆ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಕಪಾಟುಗಳ ಸಾಮಗ್ರಿಗಳೆಲ್ಲವನ್ನು ಹೊರಕ್ಕೆ ಎಳೆದುಹಾಕಿ ಚೆಲ್ಲಾಪಿಲ್ಲಿಗೊಳಿಸಿದ್ದರು. ಆದರೆ ಅಲ್ಲಿಂದ ಯಾವುದೇ ಸಾಮಾಗ್ರಿಗಳು ಕಳವುಹೋಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಸೆಪ್ಟಂಬರ್ ೯ರಂದೂ ಇದೇ ಮನೆಯಲ್ಲಿ ಕಳವು ಯತ್ನ ನಡೆದಿತ್ತು. ಅಂದು ಎರಡು ಬೈಕ್ಗಳಲ್ಲಾಗಿ ಇಬ್ಬರು ಬಂದು ಹೋಗುವ ದೃಶ್ಯಗಳು ಅಲ್ಲೇ ಪಕ್ಕದ ಮನೆಯ ಸಿಸಿ ಟಿವಿ ಯಲ್ಲಿ ಪತ್ತೆಯಾಗಿತ್ತು. ಅಂದು ಆ ಮನೆಯಿಂದ ೨೦೦೦ ರೂ.ವನ್ನು ಕಳವುಗೈದಿದ್ದರು. ಮಾತ್ರವಲ್ಲ ಮನೆಯೊಳಗಿನ ಕಪಾಟಿನಲ್ಲಿದ್ದ ಸಾಮಗ್ರಿಗಳನ್ನೆಲ್ಲವನ್ನು ಕಳ್ಳರು ಎಳೆದು ಹೊರಹಾಕಿ ಚೆಲ್ಲಾಪಿಲ್ಲಿಗೊಳಿಸಿದ್ದರು. ಮಾತ್ರವಲ್ಲ ಅಂದು ಆ ಮನೆಯ ಸಿಸಿ ಟಿವಿ ಕ್ಯಾಮರಾದ ಹಾರ್ಡ್ ಡಿಸ್ಕ್ ಮತ್ತು ಡಿವಿಆರ್ಗಳನ್ನು ಕಳ್ಳರು ಕದ್ದೊಯ್ದಿದ್ದರು. ಅದಾದ ಬೆನ್ನಲ್ಲೇ ಅದೇ ಮನೆಯಲ್ಲಿ ನಿನ್ನೆ ಮತ್ತೆ ಕಳವು ಯತ್ನ ನಡೆದಿದೆ.