ಭಾರತ- ಪಾಕ್ ಘರ್ಷಣೆ ಹಿನ್ನೆಲೆ: ಜಿಲ್ಲೆಯ ಮೂರು ಕೇಂದ್ರ  ಸಂಸ್ಥೆಗಳೂ ಸೇರಿ ನಾಲ್ಕು ಕೇಂದ್ರಗಳಿಗೆ ಬಿಗಿ ಭದ್ರತೆ

ಕಾಸರಗೋಡು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಆಪರೇಷನ್ ಸಿಂದೂರ್ ಹೆಸರಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಆರಂಭಿಸಿರುವ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದ್ದು ಅದು ಉಭಯದೇಶಗಳ ನಡುವೆ ಘರ್ಷಣೆಯ ವಾತಾವರಣ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿರುವ ಮೂರು ಕೇಂದ್ರ ಸರಕಾರಿ ಸಂಸ್ಥೆಗಳು ಸೇರಿದಂತೆ ಒಟ್ಟು ನಾಲ್ಕು ಕೇಂದ್ರಗಳಿಗೆ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ.

ಸೀತಾಂಗೋಳಿ ಕಿನ್‌ಫ್ರಾ ಕೈಗಾರಿಕಾ ಉದ್ಯಾನದ ಬಳಿ ಕಾರ್ಯವೆಸಗುತ್ತಿರುವ ಕೇಂದ್ರ ಸರಕಾರದ ರಕ್ಷಣಾ ಖಾತೆಯ ಎಚ್‌ಎಎಲ್ (ಹಿಂದೂಸ್ತಾನ್ ಏರೊನ್ಯಾಟಿಕ್ ಲಿಮಿಟೆಡ್),  ಕೂಡ್ಲಿನಲ್ಲಿರುವ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ (ಸಿಪಿಸಿಆಐ), ಪೆರಿಯಾದಲ್ಲಿರುವ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಮೊಗ್ರಾಲ್ ಪುತ್ತೂರಿಗೆ ಸಮೀಪದ ಬೆದ್ರಡ್ಕದಲ್ಲಿರುವ ಭೆಲ್ ಉದ್ಯಮ ಘಟಕಕ್ಕೆ ಈ ರೀತಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಭಾರತದತ್ತ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಕೇಂದ್ರಗಳಿಗೆ ಭದ್ರತೆ ಏರ್ಪಡಿಸಲಾಗಿದೆ. ಇದರ ಹೊರತಾಗಿ ರಾಜ್ಯದಲ್ಲಿ ಕಾರ್ಯವೆಸಗುತ್ತಿರುವ ವಾಳಿಮಲೆ ನೌಕಾ ತರಬೇತಿ ಕೇಂದ್ರ, ಕೊಚ್ಚಿಯಲ್ಲಿರುವ ನೌಕಾ ಪಡೆ ಕೇಂದ್ರ, ತಿರುವನಂತಪುರದ ವಿಳಿಂಞ ಅಂತಾರಾಷ್ಟ್ರೀಯ ಬಂದರು, ಕೊಚ್ಚಿ ಬಂದರು, ಬಾಹ್ಯಾಕಾಶ ಉಡಾವಣೆ ಕೇಂದ್ರಗಳೂ ಸೇರಿದಂತೆ ಮರ್ಮ ಪ್ರಧಾನವಾದ ಕೇಂದ್ರ ಮತ್ತು ಕೇರಳ ರಾಜ್ಯಗಳ ಸಂಸ್ಥೆಗಳಿಗೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಮಾತ್ರವಲ್ಲದೆ ಕೇರಳದ ಕರಾವಳಿ ಪ್ರದೇಶಗಳಲ್ಲೂ ಹೈ ಅಲರ್ಟ್ ನಿರ್ದೇಶ ನೀಡಲಾಗಿದೆ.

You cannot copy contents of this page