ಮಂಗಲ್ಪಾಡಿ ಆಸ್ಪತ್ರೆಯಲ್ಲಿ ೧೦ ದಿನಗಳೊಳಗೆ ರಾತ್ರಿ ಕಾಲ ಚಿಕಿತ್ಸೆ ಆರಂಭ- ಸಚಿವೆ ಭರವಸೆ
ಉಪ್ಪಳ: ಮಂಗಲ್ಪಾಡಿಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ವೇಳೆಯಲ್ಲೂ ರೋಗಿಗಳ ತಪಾಸಣೆ ನಡೆಸಬೇಕೆಂಬ ಬೇಡಿಕೆಗೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸ್ಪಂ ದಿಸಿದ್ದಾರೆ. ಇಂದು ಮಂಗಲ್ಪಾಡಿ ಆಸ್ಪತ್ರೆಗೆ ತಲುಪಿದ ಅವರು ರಾತ್ರಿ ವೇಳೆಯಲ್ಲೂ ಚಿಕಿತ್ಸಾ ವ್ಯವಸ್ಥೆ ಕೈಗೊಳ್ಳುವುದಾಗಿ ತಿಳಿಸಿದ್ದು, ೧೦ ದಿನದೊಳಗೆ ಇದಕ್ಕೆ ಪರಿಹಾರ ಉಂಟಾಗಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗೆ ನೂತನ ಕಟ್ಟಡ, ಶುದ್ಧ ಜಲ ವಿತರಣೆಗೆ ವ್ಯವಸ್ಥೆ, ಸ್ಟಾಫ್ ಕ್ವಾರ್ಟರ್ಸ್, ಡಾಕ್ಟರ್ ಸಹಿತ ನೌಕರರ ಕೊರತೆ ಪರಿಹಾರ ಮೊದಲಾದವುಗಳ ಬಗ್ಗೆ ಭರವಸೆ ನೀಡಿದರು. ಸಚಿವೆಯ ಜೊತೆಯಲ್ಲಿ ಶಾಸಕ ಎಕೆಎಂ ಅಶ್ರಫ್ ಇದ್ದರು. ಆಸ್ಪತ್ರೆಯ ಸುಪರಿಂಟೆಂಡೆಂಟ್ ಡಾ| ಶಾಂಟಿ ಕೆ.ಕೆ, ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಶಮೀನಾ ಟೀಚರ್, ಜನಪ್ರತಿನಿಧಿಗಳು ಸಹಿತ ಹಲವರು ಭಾಗವಹಿಸಿದರು.
ಬಸ್ಸಿನಲ್ಲಿ ಕರ್ನಾಟಕ ಮದ್ಯ ಪತ್ತೆ
ಮಂಜೇಶ್ವರ: ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್ಸನ್ನು ಮಂಜೇಶ್ವರ ತಪಾಸಣಾ ಕೇಂದ್ರದಲ್ಲಿ ಅಬಕಾರಿ ತಂಡ ನಡೆಸಿದ ತಪಾಸಣೆಯಲ್ಲಿ ಬ್ಯಾಗೊಂದ ರಲ್ಲಿ ತುಂಬಿಸಿಡಲಾಗಿದ್ದ ೧೦೨ ಟೆಟ್ರಾ ಪ್ಯಾಕೆಟ್ (೧೮.೩೬ ಲೀಟರ್) ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಆದರೆ ಆ ಬ್ಯಾಗ್‌ನ್ನು ಬಸ್ಸಿನಲ್ಲಿ ಯಾರು ಇರಿಸಿದ್ದರು ಎಂಬ ಬಗ್ಗೆ ಅಬಕಾರಿ ತಂಡಕ್ಕೆ ಮಾಹಿತಿ ಲಭಿಸಿಲ್ಲ. ಆದ್ದರಿಂದ ಮಾಲನ್ನು ವಶಪಡಿಸಿ ಅಬಕಾರಿ ತಂಡ ಆ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ. ಈ ತಪಾಸಣೆ ನಡೆಸಿದ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ ಜನಾರ್ದನನ್, ಸಿಇಒಗಳಾದ ದಿನೂಪ್, ಮಂಜುನಾಥ, ನಿಷಾದ್ ಟಿ ನಾಯರ್ ಮತ್ತು ಚಾಲಕ ಸತ್ಯನ್ ಎಂಬವರು ಒಳಗೊಂಡಿದ್ದರು.