ಮಂಜೇಶ್ವರದಲ್ಲಿ ಬೀಗ ಹಾಕಿದ ಮನೆಯಿಂದ 22 ಪವನ್ ಚಿನ್ನಾಭರಣ ಕಳವು: ಬೆರಳಚ್ಚು, ಶ್ವಾನದಳದಿಂದ ತಪಾಸಣೆ

ಮಂಜೇಶ್ವರ: ಬೀಗ ಹಾಕಿದ ಮನೆಯಿಂದ 22 ಪವನ್ ಚಿನ್ನಾಭರಣ ಕಳವು ನಡೆದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಂಜೇಶ್ವರ ಚರ್ಚ್ ಬೀಚ್ ರಸ್ತೆಯ ನವೀನ್ ಮೊಂತೇರೋ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಎಪ್ರಿಲ್ ೨೧ರಂದು ನವೀನ್ ಮೊಂತೇರೋ ಸಹಿತ ಕುಟುಂಬ ಮನೆಗೆ ಬೀಗ ಹಾಕಿ ಗಲ್ಫ್‌ಗೆ ತೆರಳಿದ್ದರು. ಮೇ ೩ರಂದು ಸಂಜೆ ಮರಳಿದ್ದು, ಈ ವೇಳೆ ಕಳವು ನಡೆದ ಬಗ್ಗೆ ಅರಿವಿಗೆ ಬಂದಿದೆ. ಎರಡಂತಸ್ತಿನ ಮನೆಯ ಹಿಂಭಾಗದ ಬಾಗಿಲ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಬೆಡ್ ರೂಂನಲ್ಲಿದ್ದ ಕಪಾಟು ಮುರಿದು ಚಿನ್ನಾಭರಣ ಕಳವುಗೈದಿದ್ದಾರೆ. ಈ ಬಗ್ಗೆ ನವೀನ್ ಮೊಂತೇರೋ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ತನಿಖೆಯ ಭಾಗವಾಗಿ ನಿನ್ನೆ ಬೆರಳಚ್ಚು ತಜ್ಞರು, ಶ್ವಾನದಳ ಹಾಗೂ ಇನ್‌ಸೆಕ್ಟರ್ ಅನೂಪ್ ಕುಮಾರ್ ನೇತೃತ್ವದ ಪೊಲೀಸರು ತಲುಪಿ ತನಿಖೆ ನಡೆಸಿದ್ದಾರೆ. ಮನೆಯ ಸಿ.ಸಿ ಕ್ಯಾಮರವನ್ನು ವಶಕ್ಕೆ ತೆಗೆದು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

You cannot copy contents of this page