ಮಜೀರ್‌ಪಳ್ಳ ನಿವಾಸಿಯ ನಿಗೂಢ ಸಾವು: ದಫನಗೈದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಕ್ರಮ ಆರಂಭ
ಉಪ್ಪಳ: ಯುವಕನ ಸಾವಿನಲ್ಲಿ ನಿಗೂಢತೆಗಳಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎರಡು ವಾರಗಳ ಹಿಂದೆ ದಫನಗೈದ ಮೃತದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಲು ಆರ್.ಡಿ.ಒ ಅನುಮತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ಮಂಜೇಶ್ವರ ಸಿ.ಐ ಕೆ. ರಾಜೀವ್ ಕುಮಾರ್ ನೇತೃತ್ವದಲ್ಲಿ ಕ್ರಮಗಳನ್ನು ಆರಂಭಿಸಲಾಗಿದೆ. ಮೃತದೇಹ ದಫನಗೈದ ಕನ್ಯಾನದ ಮಸೀದಿ ಬಳಿಗೆ ಪೊಲೀಸರು ಹಾಗೂ ಮೃತರ ಸಂಬಂಧಿಕರು ತಲುಪಿದ್ದಾರೆ.
ಮಜೀರ್ಪಳ್ಳ ಬದಿಯೂರು ನಿವಾಸಿ ಮಹಮ್ಮದ್ ಎಂಬವರ ಪುತ್ರ ಅಶ್ರಫ್ (44)ರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಲಾಗು ವುದು. ಅಶ್ರಫ್ ಈ ತಿಂಗಳ 6ರಂದು ಬೆಳಿಗ್ಗೆ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 5ರಂದು ರಾತ್ರಿ ಮನೆಯಲ್ಲಿ ನಿದ್ರಿಸಿದ್ದ ಅಶ್ರಫ್ ಮರುದಿನ ಬೆಳಿಗ್ಗೆ ಎದ್ದಿರಲಿಲ್ಲವೆನ್ನಲಾಗಿದೆ. ಇದರಿಂದ ಮನೆಯವರು ನೋಡಿದಾಗ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆಂದು ತಿಳಿದು ಬಂದಿತ್ತು. ಬಳಿಕ ಮೃತದೇಹವನ್ನು ಕನ್ಯಾನದ ರಹ್ಮಾನಿಯ ಜುಮಾ ಮಸೀದಿಯ ಬಳಿ ಅಂತ್ಯ ಸಂಸ್ಕಾರ ನಡೆಸಲಾಗಿತ್ತು. ಘಟನೆ ದಿನದಂದು ಪೂನಾಕ್ಕೆ ತೆರಳಿದ್ದ ಕನ್ಯಾನ ಮರಾಟಿ ಮೂಲೆಯಲ್ಲಿರುವ ಸಹೋದರ ಇಬ್ರಾಹಿಂಗೆ ಅಂದು ತಲುಪಲು ಸಾಧ್ಯವಾಗಿರಲಿಲ್ಲ ವೆನ್ನಲಾಗಿದೆ. ಊರಿಗೆ ಮರಳಿದ ಬಳಿಕ ಅವರು ಅಶ್ರಫ್‌ರ ಸಾವಿನಲ್ಲಿ ನಿಗೂಢತೆಗಳಿವೆ ಯೆಂದು ಸಂಶಯ ವ್ಯಕ್ತಪಡಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಆರ್.ಡಿ.ಒರ ಅನುಮತಿ ಆಗ್ರಹಿಸಲಾಗಿತ್ತು. ಆರ್.ಡಿ.ಒರ ಅನುಮತಿ ಲಭಿಸಿದ ಹಿನ್ನೆಲೆಯಲ್ಲಿ ದಫನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ.