ಮದುವೆ ಚಪ್ಪರ ಬಿಚ್ಚುತ್ತಿದ್ದ ವೇಳೆ ವಿದ್ಯುತ್ ಶಾಕ್ ತಗಲಿ ಕರ್ನಾಟಕದ ಕಾರ್ಮಿಕ ಸಾವು
ಕಾಸರಗೋಡು: ಮದುವೆಗಾಗಿ ಹಾಕಲಾದ ಚಪ್ಪರವನ್ನು ಬಿಚ್ಚುತ್ತಿದ್ದ ವೇಳೆ ಅಲ್ಲೇ ಸಮೀಪದ ವಿದ್ಯುತ್ ತಂತಿಯಿಂದ ಶಾಕ್ ತಗಲಿ ಕರ್ನಾ ಟಕದ ಕಾರ್ಮಿಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನಗರದಲ್ಲಿ ನಿನ್ನೆ ನಡೆದಿದೆ.
ಕರ್ನಾಟಕ ಬಾಗಲಕೋಟೆ ಮುಂಡರಾಯಿ ಸಾಗವಾಡಿ ನಿವಾಸಿ ರಾಮಣ್ಣ ಎಂಬವರ ಪುತ್ರ ಪ್ರಮೋದ್ ರಾಮಣ್ಣ (27) ಸಾವನ್ನಪ್ಪಿದ ದುರ್ದೈವಿ.
ನಗರದ ತಳಂಗರೆ ತೆರುವತ್ ಗೋಲ್ಡನ್ ಬೇಕರಿ ಸಮೀಪದ ಮನೆಯೊಂದರಲ್ಲಿ ನಡೆದ ವಿವಾಹ ಸಮಾರಂಭಕ್ಕಾಗಿ ನಿರ್ಮಿಸಲಾದ ಚಪ್ಪರವನ್ನು ಪ್ರಮೋದ್ ರಾಮಣ್ಣ ಸೇರಿದಂತೆ ಇತರ ಕಾರ್ಮಿಕರು ಸೇರಿ ಕಳಚಿ ತೆಗೆದ ಬಳಿಕ ಚಪ್ಪರ ಸಾಮಗ್ರಿಗಳನ್ನು ನಿನ್ನೆ ಮಧ್ಯಾಹ್ನದ ವೇಳೆ ಚಪ್ಪರದ ಸಾಮಗ್ರಿಗಳನ್ನು ಲಾರಿಗೆ ಹೇರುತ್ತಿದ್ದ ವೇಳೆ ಅದರಲ್ಲಿದ್ದ ಕಬ್ಬಿಣದ ತಂತಿ ಅಲ್ಲೇ ಪಕ್ಕ ಹಾದು ಹೋಗುತ್ತಿದ್ದ ವಿದ್ಯುತ್ ತಂತಿಗೆ ಸ್ಪರ್ಶಿಸಿದ್ದು, ಅದರಿಂದ ಪ್ರಮೋದ್ಗೆ ವಿದ್ಯುತ್ ಶಾಕ್ ತಗಲಿ ಅಲ್ಲೇ ಅವರು ಕುಸಿದು ಬಿದ್ದಿದ್ದಾರೆ. ಆ ಮನೆಯವರು ಮತ್ತು ಇತರ ಕಾರ್ಮಿಕರು ಸೇರಿ ಪ್ರಮೋದ್ರನ್ನು ತಕ್ಷಣ ತಳಂಗರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಅಷ್ಟರೊಳಗೆ ಪ್ರಮೋದ್ ರ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಇವರು ಚೆರ್ಕಳದ ಕ್ವಾರ್ಟರ್ಸ್ ಒಂದರಲ್ಲಿ ವಾಸಿಸಿ ಕಾರ್ಮಿಕ ವೃತ್ತಿ ನಡೆಸುತ್ತಿದ್ದರು. ಕಾಸರಗೋಡು ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು.