ಕಾಸರಗೋಡು: ಮನೆ ಹಿತ್ತಿಲ ಕೆಲಸದ ಸೋಗಿನಲ್ಲಿ ಬಂದು ಚಿನ್ನ ಕಳವುಗೈದ ಯುವಕನನ್ನು ಮನೆಯೊಡತಿ ಸಕಾಲದಲ್ಲಿ ಅನುಸರಿಸಿದ ತಂತ್ರಗಾರಿಕೆಯಲ್ಲಿ ಆತನನ್ನು ಸೆರೆ ಹಿಡಿಯುವಂತೆ ಮಾಡಿದ ಘಟನೆ ನಡೆದಿದೆ.
ಉತ್ತರ ಪ್ರದೇಶ ಫರುಖಾಬಾದ್ ಕಮಲ್‌ಗಂಜ್ ಚೀರುಪುರದ ಸೂರಜ್ (೨೬) ಸೆರೆಗೊಳಗಾದ ಯುವಕ. ನಿನ್ನೆ ಬೆಳಿಗ್ಗೆ ೧೧ ಗಂಟೆಗೆ ಈತ ಬಂದಡ್ಕ ನರಂಬಲಕಂಡದ ಬಿ. ಕುಂಞಾಣಿ ಎಂಬವರ ಮನೆ ಹಿತ್ತಿಲ ಕೆಲಸದ ಸೋಗಿನಲ್ಲಿ ಇತರ ಇಬ್ಬರು ಕಾರ್ಮಿಕರ ಜೊತೆ ಬಂದಿದ್ದಾನೆ. ಆ ವೇಳೆ ಕುಂಞಾಣಿಯವರ ಸಹೋದರಿ ಬಿ. ನಾರಾಯಣಿ ಕೂಡಾ ಮನೆಯಲ್ಲಿದ್ದರು. ಆರೋಪಿ ಸೂರಜ್ ಮತ್ತು ಆತನ ಜತೆಗಿದ್ದ ಇಬ್ಬರು ಹಿತ್ತಿಲ ಕೆಲಸದಲ್ಲಿ ತೊಡಗಿದ್ದ ವೇಳೆ ಕುಂಞಾಣಿ ಹೊರಗಡೆ ಬಟ್ಟೆ ಒಗೆಯಲು ಹೋಗಿದ್ದರು. ಆ ವೇಳೆ ಆರೋಪಿ ಸೂರಜ್ ದಿಢೀರ್ ಆಗಿ ಮನೆಯೊಳಗೆ ಪ್ರವೇಶಿಸಿದ್ದಾನೆ. ಅದಾದ ಸ್ವಲ್ಪ ಹೊತ್ತಿನಲ್ಲಿ ಆತ ಮನೆಯೊಳಗಿನಿಂದ ಹೊರಗೆ ಬರುತ್ತಿರುವುದನ್ನು ಕುಂಞಾಣಿ ಗಮನಿಸಿದ್ದಾರೆ. ಆಗ ಇತರ ಇಬ್ಬರು ಕಾರ್ಮಿಕರು ಹಿತ್ತಿಲ ಕೆಲಸದಲ್ಲಿ ನಿರತರಾಗಿದ್ದರು. ಈ ಕಾರ್ಮಿಕರು ಆಟೋ ರಿಕ್ಷಾದಲ್ಲಿ ಆ ಮನೆಗೆ ಬಂದಿದ್ದು, ಅದನ್ನು ಅಲ್ಲೇ ಮನೆ ಪಕ್ಕ ನಿಲ್ಲಿಸಿದ್ದರು. ಮನೆಯೊಳಗಿನಿಂದ ಹೊರ ಬಂದ ಸೂರಜ್ ನಂತರ ಆಟೋ ರಿಕ್ಷಾದ ಬಳಿ ಬಂದು ಅಲ್ಲಿ ಯಾವುದೋ ವಸ್ತುವನ್ನು ಇರಿಸಿದ ನಂತರ ಹಿತ್ತಿಲ ಕೆಲಸದಲ್ಲಿ ತೊಡಗಿರುವುದನ್ನೂ ಕುಂಞಾಣಿ ಗಮನಿಸಿದ್ದಾರೆ. ಇದರಿಂದ ಶಂಕೆಗೊಂಡ ಕುಂಞಾಣಿ ಮನೆಯೊಳಗೆ ಹೋಗಿ ನೋಡಿದಾಗ ಮನೆ ಕೊಠಡಿಯೊಳಗಿದ್ದ ಕಪಾಟನ್ನು ತೆರೆದು ಅದರಲ್ಲಿದ್ದ ಎರಡು ಪವನ್‌ನ ಚಿನ್ನದ ಸರ ಮತ್ತು ಅರ್ಧ ಪವನ್‌ನ ಬೆಂಡೋಲೆ ನಷ್ಟಗೊಂಡಿರುವುದನ್ನು ಕಂಡಿದ್ದಾರೆ. ಆ ಕೂಡಲೇ ಅವರು ಪುತ್ರ ಕೆ.ಪಿ. ರಂಜಿತ್‌ನನ್ನು ಫೋನ್ ಮುಖಾಂತರ ಕರೆದು ವಿಷಯ ತಿಳಿಸಿದ್ದಾರೆ. ರಂಜಿತ್ ಆ ಬಗ್ಗೆ ಬೇಡಗ ಪೊಲೀಸರಿಗೂ ಮಾಹಿತಿ ನೀಡಿದ್ದಾನೆ. ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಲ್ಲೇ ಪಕ್ಕ ನಿಲ್ಲಿಸಲಾಗಿದ್ದ ಆ ಕಾರ್ಮಿಕರು ಬಂದ ಆಟೋ ರಿಕ್ಷಾವನ್ನು ತಪಾಸಣೆಗೊಳಪಡಿ ಸಿದಾಗ ಅದರಲ್ಲಿ ಚಿನ್ನ ಪತ್ತೆಹಚ್ಚಿದ್ದಾರೆ. ಆ ಕೂಡಲೇ ಪೊಲೀಸರು ಆರೋಪಿ ಸೂರಜ್‌ನನ್ನು ಸೆರೆ ಹಿಡಿದು ಠಾಣೆಗೆ ಒಯ್ದು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.