ಮನೆಯಿಂದ 75 ಪವನ್ ಚಿನ್ನಾಭರಣ ಕಳವು: ಕಬ್ಬಿಣದ ಸರಳು, ತಲವಾರು ಉಪೇಕ್ಷಿಸಿ ಕಳ್ಳರು ಪರಾರಿ
ಹೊಸದುರ್ಗ: ಮೊಗ್ರಾಲ್ ಪುತ್ತೂರು, ಮಚ್ಚಂಪಾಡಿಯಲ್ಲಿ ನಡೆದ ಕಳವಿನ ಬೆನ್ನಲ್ಲೇ ಪಯ್ಯನ್ನೂರಿನಲ್ಲಿ ಮನೆಯಿಂದ ಭಾರೀ ಸೊತ್ತುಗಳು ಕಳವಿಗೀಡಾಗಿದೆ.
ಮನೆಯ ಮುಂಭಾಗದ ಬಾಗಿಲು ಒಡೆದು ಒಳಗೆ ನುಗ್ಗಿದ ಕಳ್ಳರು 75 ಪವನ್ ಚಿನ್ನಾಭರಣಗಳನ್ನು ದೋಚಿದ್ದಾರೆ. ಪಯ್ಯನ್ನೂರು ಪೆರುಂಬದಲ್ಲಿರುವ ಸಿ.ಎಚ್. ಸುಹರಾ ಎಂಬವರ ಮನೆಯಿಂದ ನಿನ್ನೆ ರಾತ್ರಿ ಈ ಕಳವು ನಡೆದಿದೆ. ಸುಹರಾರ ಪತಿ ಅಸೌಖ್ಯ ಬಾಧಿಸಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಸುಹರಾ ಪತಿಯೊಂದಿಗೆ ಆಸ್ಪತ್ರೆಯಲ್ಲಿದ್ದರು. ಮನೆಯಲ್ಲಿ ಮಗ, ಆತನ ಪತ್ನಿ ಹಾಗೂ ಮಗಳು ಇದ್ದರು. ಇವರು ಮನೆಯ ಮೇಲಂತಸ್ತಿನಲ್ಲಿ ನಿದ್ರಿಸಿದ್ದರು. ಇಂದು ಬೆಳಿಗ್ಗೆ 7 ಗಂಟೆಗೆ ಇವರು ಎದ್ದು ನೋಡಿದಾಗಲೇ ಮನೆಗೆ ಕಳ್ಳರು ನುಗ್ಗಿ ಚಿನ್ನಾಭರಣಗಳನ್ನು ದೋಚಿದ ವಿಷಯ ಅರಿವಿಗೆ ಬಂದಿದೆ. ಮನೆಯ ಮುಂಭಾಗದ ಬಾಗಿಲು ತೆರೆದುಕೊಂಡಿರುವುದು ಗಮನಕ್ಕೆ ಬಂದು ನೋಡಿದಾಗ ಎರಡು ಕೊಠಡಿಗಳಲ್ಲಿದ್ದ ಕಪಾಟುಗಳು ತೆರೆದಿಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. ಒಂದು ಕೊಠಡಿಯಲ್ಲಿ ಕಬ್ಬಿಣದ ಸರಳು, ಮತ್ತೊಂದು ಕೊಠಡಿಯಲ್ಲಿ ತಲವಾರು ಉಪೇಕ್ಷಿಸಿದ ಸ್ಥಿತಿಯ ಲ್ಲಿತ್ತು. ಕಳವು ವೇಳೆ ಯಾರಾದರೂ ಅಲ್ಲಿಗೆ ತಲುಪಿದರೆ ಅವರ ಮೇಲೆ ಆಕ್ರಮಿಸಲು ಕಳ್ಳರು ತಲವಾರನ್ನು ತಂದಿರಬಹುದೆಂದು ಅಂದಾಜಿಸ ಲಾಗಿದೆ. ಘಟನೆ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಕಾಸರಗೋಡಿನ ಮೊಗ್ರಾಲ್ ಪುತ್ತೂರು ಹಾಗೂ ಮಂಜೇಶ್ವರ ಬಳಿಯ ಮಚ್ಚಂಪಾಡಿಯಲ್ಲಿ ಮನೆಗಳಿಗೆ ಮೊನ್ನೆ ನುಗ್ಗಿದ್ದರು. ಈ ಘಟನೆಯ ಬೆನ್ನಲ್ಲೇ ಪಯ್ಯನ್ನೂರಿನಲ್ಲಿ ಮನೆ ಕಳವು ನಡೆದಿದೆ.