ಮನೆಯಿಂದ ಕದ್ದ ನಗ-ನಗದು ಪತ್ತೆ ಓರ್ವ ಬಲೆಗೆ; ಇನ್ನೋರ್ವ ಪರಾರಿ
ಕಾಸರಗೋಡು: ಮನೆಯೊಂದರಿಂದ ಕದ್ದ ನಗ-ನಗದು ಒಳಗೊಂಡ ಗಂಟುಮೂಟೆಯೊಂದಿಗೆ ಸಾಗುತ್ತಿದ್ದ ವೇಳೆ ಅದು ಪೊಲೀಸರ ಕಣ್ಣಿಗೆ ಬಿದ್ದಾಗ ಅದನ್ನು ಕದ್ದ ಕಳ್ಳರ ಪೈಕಿ ಓರ್ವ ತಪ್ಪಿಸಿಕೊಂಡು ಇನ್ನೋ ರ್ವ ಪೊಲೀಸರ ಬಲೆಗೊಳಗಾದ ಘಟನೆ ನಗರದಲ್ಲಿ ನಡೆದಿದೆ.
ಚಂದ್ರಗಿರಿ ವಿಕಲ ಚೇತನರೋರ್ವರು ತಮ್ಮ ಮನೆಗೆ ಬೀಗ ಜಡಿದು ಹೊರಗೆ ಹೋಗಿದ್ದರು. ಆ ವೇಳೆ ಆ ಮನೆಗೆ ಕಳ್ಳರು ನುಗ್ಗಿ ಅಲ್ಲಿಂದ ನಗ-ನಗದು ಕದ್ದು ಅದನ್ನು ಗಂಟುಮೂಟೆ ಕಟ್ಟಿ ಚಂದ್ರಗಿರಿ ಸೇತುವೆ ಬಳಿ ನಿನ್ನೆ ರಾತ್ರಿ ತಂದಿರಿಸಿದ್ದರು. ಆಗ ಕಾಸರಗೋಡು ಪೊಲೀಸ್ ಠಾಣೆಯ ಎಸ್ಐ ಕೆ.ಪಿ. ವಿನೋದ್ ಕುಮಾರ್ ನೇತೃತ್ವದ ಪೊಲೀಸರು ಅಲ್ಲಿಗೆ ಆಗಮಿಸಿದಾಗ ಅಲ್ಲಿದ್ದ ಕಳ್ಳರಿಬ್ಬರು ಅಲ್ಲಿಂದ ಪರಾರಿಯಾಗಲೆತ್ನಿಸಿದ್ದಾರೆ. ಅದರಲ್ಲಿ ಓರ್ವನನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಪೊಲೀಸರು ಸಫಲರಾದರು. ಈತ ಅಣಂಗೂರು ನಿವಾಸಿಯಾಗಿದ್ದಾನೆ. ಆತನ ಜತೆಗಿದ್ದಾತ ಉದುಮ ನಿವಾಸಿಯಾಗಿರು ವುದಾಗಿ ಹೇಳಲಾಗುತ್ತಿರುವ ವ್ಯಕ್ತಿ ಪರಾರಿಯಾಗಿದ್ದಾನೆ.