ಮನೆಯಿಂದ ಕಳವಿಗೆತ್ನ: ಮಗುವಿನ ಅಳು ಕೇಳಿ ಮನೆಯವರು ಎಚ್ಚೆತ್ತಾಗ ಪರಾರಿಯಾದ ಆರೋಪಿ ಗಂಟೆಗಳೊಳಗೆ ಸೆರೆ
ಕುಂಬಳೆ: ಮುಂಜಾನೆ ಹೊತ್ತಿನಲ್ಲಿ ಮನೆಗೆ ನುಗ್ಗಿ ಕಳವು ನಡೆಸಲೆತ್ನಿಸಿದ ಪ್ರಕರಣದ ಆರೋಪಿಯನ್ನು ಪೊಲೀಸರು ಗಂಟೆಗಳೊಳಗೆ ಬಂಧಿಸಿದ್ದಾರೆ. ಜೋಡುಕಲ್ಲು ಬಳಿಯ ಶಾಂತಿಯೋಡು ಕೆ.ಕೆ ನಗರ ನಿವಾಸಿಯೂ, ಈಗ ಕುಬಣೂರು ಸಫಾ ನಗರದ ಫ್ಲಾಟ್‌ನಲ್ಲಿ ವಾಸಿಸುವ ಕಲಂದರ್ ಶಾಫಿ (34) ಎಂಬಾತನನ್ನು ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಮುಂಜಾನೆ 3 ಗಂಟೆ ವೇಳೆ ಜೋಡುಕಲ್ಲು ನಿವಾಸಿ ಕೆ. ಹರೀಶ ಎಂಬವರ ಮನೆಗೆ ನುಗ್ಗಿ ಈತ ಕಳವಿಗೆ ಯತ್ನಿಸಿದ್ದನು. ಬಾಗಿಲು ತೆರೆದು ಒಳನುಗ್ಗಿದ ಆರೋಪಿ ಕಳವಿಗೆತ್ನಿಸುತ್ತಿದ್ದ ವೇಳೆ ನಿದ್ರಿಸಿದ್ದ ಮಗುವಿನ ಕಾಲಿಗೆ ಮೆಟ್ಟಿದ್ದನು. ಅಷ್ಟರಲ್ಲಿ ಮಗು ಅಳತೊಡಗಿದ್ದು, ಕೂಡಲೇ ಮನೆಯವರು ಎಚ್ಚೆತ್ತಾಗ ಆರೋಪಿ ಓಡಿ ಪರಾರಿಯಾಗಿದ್ದನು. ಬಳಿಕ ಆಟೋ ರಿಕ್ಷಾದಲ್ಲಿ ತೆರಳಿರುವುದಾಗಿ ಅರಿವಿಗೆ ಬಂದಿದೆ. ಈ ಬಗ್ಗೆ ಹರೀಶ ನೀಡಿದ ದೂರಿನಂತೆ ಕೇಸು ದಾಖಲಿಸಿಕೊಂಡ ಪೊಲೀಸರು ಕೂಡಲೇ ತನಿಖೆ ತೀವ್ರಗೊಳಿಸಿ ವಿವಿಧೆಡೆಗಳ ಸಿಸಿ ಕ್ಯಾಮರಾ ಪರಿಶೀಲಿಸಿದ್ದಾರೆ.
ಈ ವೇಳೆ ಕಳವಿಗೆತ್ನಿಸಿದ ಆರೋಪಿ ಕಲಂದರ್ ಶಾಫಿಯೆಂದು ಖಚಿತಗೊಂಡಿತ್ತು. ಕೂಡಲೇ ನಿನ್ನೆ ರಾತ್ರಿ ಸಫಾ ನಗರಕ್ಕೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೆ ಈತ ಪರಾರಿಯಾದ ಆಟೋ ರಿಕ್ಷಾವನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿ ದ್ದಾರೆ. ಆರೋಪಿಯನ್ನು ಇಂದು ನ್ಯಾಯಾಲಯದಲ್ಲಿ ಹಾಜರು ಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಸೆರೆಹಿಡಿದ ತಂಡದಲ್ಲಿ ಎಸ್‌ಐ ಜೊತೆಗೆ ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಅಬ್ದುಲ್ ಸಲಾಂ, ಅನೂಪ್ ಎಂಬಿವರಿದ್ದರು.