ಮರದ ಮಿಲ್ಲಿನ ಸುಪರ್ವೈಸರ್ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಮನೆಯವರು ದೇವಸ್ಥಾನಕ್ಕೆ ತೆರಳಿದ ಸಂದರ್ಭದಲ್ಲಿ ಮನೆಯೊಡೆಯ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಪಾರಕಟ್ಟೆ ಗೋಕುಲ್ ನಿವಾಸ್ನ ಕೃಷ್ಣನ್ (54) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಪೊವ್ವಲ್ ಬಳಿ ಮಾಸ್ತಿಕುಂಡ್ನ ಮರದ ಮಿಲ್ಲಿನಲ್ಲಿ ಸೂಪರ್ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ ಮನೆಯವರು ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಕೃಷ್ಣನ್ ಮನೆಯಲ್ಲಿದ್ದರು. ಮನೆಯವರು ೯.೩೦ರ ವೇಳೆ ಮರಳಿ ಬಂದಾಗ ಕೃಷ್ಣನ್ ಅಡುಗೆ ಕೋಣೆಯ ಹೊರಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆನ್ನಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ದಿವಂಗತರಾದ ಕೊರಗ- ಕಾರ್ತ್ಯಾಯಿನಿ ದಂಪತಿಯ ಪುತ್ರನಾದ ಮೃತರು ಪತ್ನಿ ಸುರೇಖ, ಮಕ್ಕಳಾದ ಪ್ರಜ್ವಲ್, ಗ್ರೀಶ್ಮ, ಸಹೋದರಿ ಲೀಲಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.