ಮಸೀದಿ ಆವರಣದಲ್ಲಿ ಕಾರು ಬೆಂಕಿಗಾಹುತಿಯಾದ ಘಟನೆ: ಮಾಜಿ ಸಿಬ್ಬಂದಿ ಸೆರೆ
ಬದಿಯಡ್ಕ: ಪೈಕ ಜುಮಾ ಮಸೀದಿಯ ಆವರಣದೊಳಗೆ ನಿಲ್ಲಿಸಲಾಗಿದ್ದ ಕಾರು ಬೆಂಕಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಪ್ರಸ್ತುತ ಮಸೀದಿಯಿಂದ ಈ ಹಿಂದೆ ವಜಾಗೈಯ್ಯಲಾಗಿದ್ದ ಸಿಬ್ಬಂದಿಯನ್ನು ಎಸ್‌ಐ ಉಮೇಶ್ ನೇತೃತ್ವದ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಮಲಪ್ಪುರಂ ಮುನ್ನೂರು ನಿವಾಸಿ ಅಬೂಬಕರ್ (52) ಬಂಧಿತ ಆರೋಪಿ. ಆತನ ಮನೆಯಿಂದಲೇ ಪೊಲೀಸರು ಬಂಧಿಸಿದ್ದಾರೆ. ಪೈಕ ಜುಮಾ ಮಸೀದಿಯ ಇಮಾಮ್ ಹಾಗೂ ಉಸ್ತಾದ್ ಆಗಿರುವ ಉಸ್ಮಾನ್ ರಾಸಿ ಬಾಖವಿ ಹೈಮತ್‌ನ ಕಾರನ್ನು ಅದೇ ಮಸೀದಿಯ ಆವರಣದೊಳಗೆ ಜುಲೈ31ರಂದು ಮುಂಜಾನೆ ಕಿಚ್ಚಿಡಲಾಗಿತ್ತು. ಇಮಾಂರ ನಿಕಟ ಸಂಬಂಧಿ ಅಬ್ದುಲ್ಲ ಮಂಗಲ್ಪಾಡಿ ಯವರ ಮಾಲಕತ್ವದಲ್ಲಿರುವ ಕಾರು ಇದಾಗಿದೆ. ಕಾರಿನಲ್ಲಿದ್ದ ಪಾಸ್ ಪೋರ್ಸ್ ಮತ್ತಿತರ ದಾಖಲುಗಳು ಬೆಂಕಿಗೀಡಾಗಿತ್ತು. ಆರೋಪಿ ಅಬೂಬಕರ್‌ನನ್ನು ಈ ಹಿಂದೆ ಕಾರಣಾಂತರದಿಂದ ಕೆಲಸದಿಂದ ವಜಾಗೈಯ್ಯಲಾಗಿತ್ತು. ಆ ಬಳಿಕ ಇಮಾಂರಿಗೆ ಆರೋಪಿ ಹಲವು ಬಾರಿ ಫೋನ್ ಮೂಲಕ ಬೆದರಿಕೆ ಸಂದೇಶವನ್ನೂ ಕಳುಹಿಸಿದ್ದನೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ.