ಕಾಸರಗೋಡು: ಮಾಯಿಪಾಡಿಗೆ ಸಮೀಪದ ಕುದ್ರೆಪ್ಪಾಡಿಯಲ್ಲಿ ನಿನ್ನೆ ಮುಂಜಾನೆ ದೇವಸ್ಥಾನಕ್ಕೆ ಹೋಗುತ್ತಿದ್ದ ಕುದ್ರೆಪ್ಪಾಡಿಯ ಕೃಷ್ಣ ಬೆಳ್ಚಪ್ಪಾಡರ ಪತ್ನಿ ಕಾರ್ತ್ಯಾಯಿನಿ (೭೬) ಎಂಬವರ ಕುತ್ತಿಗೆಯಿಂದ ಎರಡೂವರೆ ಪವನಿನ ಚಿನ್ನದ ಸರ ಎಗರಿಸಿ ಪರಾರಿಯಾದ ಸ್ಕೂಟಿ ಯಲ್ಲಿ ಬಂದ ಕಳ್ಳನ ಪತ್ತೆಗಾಗಿ ವಿದ್ಯಾನಗರ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.
ಆ ಪರಿಸರದಿಂದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದು, ಅದರಲ್ಲಿ ಕಳ್ಳನು ಸಂಚರಿಸುತ್ತಿದ್ದ ಸ್ಕೂಟಿಯ ನಂಬ್ರ ಅಸ್ಪಷ್ಟವಾಗಿ ಗೋಚರಿಸಿದೆ.
ಕಾರ್ತ್ಯಾಯಿನಿಯವರು ನಿನ್ನೆ ಮುಂಜಾನೆ ೫.೫೫ಕ್ಕೆ ಕುದ್ರೆಪ್ಪಾಡಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗುತ್ತಿದ್ದ ದಾರಿ ಮಧ್ಯೆ ಹೆಲ್ಮೆಟ್ ಧರಿಸಿ ಸ್ಕೂಟಿಯಲ್ಲಿ ಬಂದ ಕಳ್ಳ ಅವರ ಕುತ್ತಿಗೆಯಿಂದ ಚಿನ್ನದ ಸರ ಕಿತ್ತೆಸೆದು ಪರಾರಿಯಾಗಿದ್ದಾನೆ. ಆ ಬಗ್ಗೆ ನೀಡಲಾದ ದೂರಿನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ವಿದ್ಯಾನಗರ ಮಾತ್ರವಲ್ಲದೆ, ಬೇಕಲ, ಮೇಲ್ಪರಂಬ, ಬೇಡಡ್ಕ ಮತ್ತು ಹೊಸದುರ್ಗ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲೇ ಹೆಚ್ಚಾಗಿ ಇಂತಹ ಘಟನೆ ನಡೆಯುತ್ತಿದೆ. ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನಗಳಲ್ಲಿ ಬರುವ ಕಳ್ಳರೇ ಇಂತಹ ದುಷ್ಕೃತ್ಯವೆಸಗುತ್ತಿದ್ದಾರೆ.