ಪೊನ್ನಾನಿ: ಹಡಗೊಂದು ಮೀನುಗಾರಿಕಾ ದೋಣಿಗೆ ಢಿಕ್ಕಿ ಹೊಡೆದು ಬೆಸ್ತರಿಬ್ಬರು ದಾರುಣವಾಗಿ ಸಾವನ್ನಪ್ಪಿ, ನಾಲ್ವರು ಅಪಾಯದಿಂದ ಪಾರಾದ ಘಟನೆ ಮಲಪ್ಪುರಂ ಪೊನ್ನಾನಿ ಬ ಳಿ ನಡೆದಿದೆ.
ಮೃತರನ್ನು ಅಳಿಕ್ಕಲ್ ನಿವಾಸಿ (ಬೋಟಿನ ಸ್ರಾಂಕ್) ಅಬ್ದುಲ್ ಸಲಾಂ ಮತ್ತು ಪೊನ್ನಾನಿ ನಿವಾಸಿ ಗಫೂರ್ ಎಂದು ಗುರುತಿಸಲಾಗಿದೆ. ಅಳಿಕ್ಕಲ್ ನಿವಾಸಿ ಮರಕ್ಕಾಟ್ ನೈನಾರ್ ಎಂಬವರ ಮಾಲಕತ್ವದಲ್ಲಿರುವ ಬೋಟ್ನಲ್ಲಿ ಒಟ್ಟು ಆರು ಮಂದಿ ಮೀನುಗಾರಿಕೆಗಾಗಿ ಇಂದು ಮುಂಜಾನೆ ಸಮುದ್ರಕ್ಕಿಳಿದಿದ್ದರು. ಬೋಟ್ ಪೊನ್ನಾನಿಯಿಂದ ೩೮ ನೋಟಿಕ್ಕಲ್ ಮೈಲು ದೂರದ ಸಮುದ್ರಕ್ಕೆ ಸಾಗಿದಾಗ ಅದಕ್ಕೆ ಹಡಗು ಢಿಕ್ಕಿ ಹೊಡೆದ ದುರ್ಘಟನೆ ನಡೆದಿದೆ. ಢಿಕ್ಕಿ ಆಘಾತಕ್ಕೆ ಬೋಟು ನುಚ್ಚುನೂರಾಗಿದೆ. ಅದರಲ್ಲಿದ್ದ ಆರು ಮಂದಿಯ ಪೈಕಿ ನಾಲ್ವರು ಅದೃಷ್ಟವಶಾತ್ ಅನಾಹುತದಿಂದ ಪಾರಾಗಿ ದಡ ಸೇರಿದ್ದಾರೆ. ಇಬ್ಬರು ಆ ವೇಳೆ ನಾಪತ್ತೆ ಯಾಗಿದ್ದರು. ಅವರಿಗಾಗಿ ಬಳಿಕ ಕರಾವಳಿ ಪೊಲೀಸರು, ಮೀನುಗಾರಿಕಾ ಇಲಾಖೆಯವರು ಮತ್ತು ಇತರ ಬೆಸ್ತರು ಸೇರಿ ಬಳಿಕ ಸಮುದ್ರದಾದ್ಯಂತ ಶೋಧ ಆರಂಭಿಸಿದಾಗ ನಾಪತ್ತೆಯಾದವರ ಮೃತದೇಹ ಬಳಿಕ ಪತ್ತೆಯಾಗಿದೆ. ಇವರ ದೇಹದಲ್ಲಿ ಆಳವಾದ ಗಾಯಗಳೂ ಪತ್ತೆಯಾಗಿವೆ.