ಮುಚ್ಚುಗಡೆಗೊಂಡ ಕಂಚಿಕಟ್ಟೆ ಸೇತುವೆ: ಸಂಚಾರಕ್ಕೆ ಬದಲಿ ವ್ಯವಸ್ಥೆ ಏರ್ಪಡಿಸದಿದ್ದರೆ ಚಳವಳಿ- ಕ್ರಿಯಾ ಸಮಿತಿ

ಕುಂಬಳೆ: ಕಂಚಿಕಟ್ಟೆ ಸೇತುವೆ ಮುಚ್ಚುಗಡೆಗೊಳಿಸಿರುವುದರಿಂದ ನಾಗರಿಕರು ಸಂಚಾರ ಸಮಸ್ಯೆಯನ್ನು ಎದುರಿಸುತ್ತಿದ್ದು, ಇದರಿಂದ ಬದಲಿ ವ್ಯವಸ್ಥೆ ಏರ್ಪಡಿಸಬೇಕೆಂದು  ಕ್ರಿಯಾ ಸಮಿತಿ ಒತ್ತಾಯಿಸಿದೆ. ನಿನ್ನೆ ಸಂಜೆ ೨೦೦ರಷ್ಟು ಮಂದಿ ನಾಗರಿಕರು ಸೇರಿ ಕ್ರಿಯಾ ಸಮಿತಿ ರೂಪೀಕರಿಸಿದ್ದಾರೆ. ಅಪಾಯಸ್ಥಿತಿಯಲ್ಲಿದ್ದ ಹಿನ್ನೆಲೆಯಲ್ಲಿ ಸೇತುವೆ ಮೂಲಕ ಘನ ವಾಹನಗಳ ಸಂಚಾರಕ್ಕೆ ನಿಯಂತ್ರಣ ಹೇರಿ ಹಲವು ವರ್ಷಗಳಾಯಿತು. ಆದರೆ ಇದುವರೆಗೆ ಸೇತುವೆಯ ದುರಸ್ಥಿ ಕಾಮಗಾರಿ ಅಥವಾ ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಂಡಿಲ್ಲ. ಕುಂಬಳೆ ಪಂಚಾಯತ್‌ನ ಕುಂಡಾಪು, ಕೆಳಗಿನ ಕೊಡ್ಯಮ್ಮೆ, ಆರಿಕ್ಕಾಡಿ, ಚತ್ರಂಪಳ್ಳ, ಚೂರಿತ್ತಡ್ಕ, ಕಂಚಿಕಟ್ಟೆ, ಮಳಿ ಎಂಬೆಡೆಗಳಲ್ಲಿನ ನೂರಾರು ಮಂದಿ  ದಿನನಿತ್ಯ ಸಂಚರಿ ಸುವ ಸೇತುವೆ ಇದಾಗಿದೆ. ಆರಿಕ್ಕಾಡಿ, ಕೊಡ್ಯಮ್ಮೆ ಭಾಗದವರಿಗೆ ಕುಂಬಳೆ ಪೇಟೆಗೆ ತಲುಪಬೇಕಾದರೆ ಇದೇ ಸೇತುವೆ ಮೂಲಕ ಸಂಚರಿಸಬೇಕಾಗಿದೆ.

ನಾಲ್ಕು ತಿಂಗಳ ಹಿಂದೆ ಜಿಲ್ಲಾಧಿಕಾರಿ ಈ ಸೇತುವೆ ಮೂಲಕ ವಾಹನ ಸಂಚಾರಕ್ಕೆ ನಿಷೇಧ ಹೇರಿದ್ದರು. ಮಾರ್ಚ್ ತಿಂಗಳಲ್ಲಿ ಪರೀಕ್ಷೆಗಳು ನಡೆಯುತ್ತಿರುವುದರಿಂದ ಸಣ್ಣ ಪುಟ್ಟ ವಾಹನಗಳಿಗೆ ಸಂಚರಿಸಲು ತಾತ್ಕಾಲಿಕವಾಗಿ ಅನುಮತಿ ನೀಡಲಾಗಿತ್ತು. ಆದರೆ ಇತ್ತೀಚೆಗೆ ಸೇತುವೆ ಮೇಲೆ ಕಾಂಕ್ರೀಟ್ ಗೋಡೆ ನಿರ್ಮಿಸಿ ಪೂರ್ಣವಾಗಿ ಮುಚ್ಚುಗಡೆಗೊಳಿ ಸಲಾಗಿದೆ. ಇದರಿಂದ ಜನರು ಸಂಚಾರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸೇತುವೆ ನಿರ್ಮಾಣಕ್ಕಾಗಿ ಮೊತ್ತ ಮೀಸಲಿರಿಸಲಾಗಿದ್ದರೂ  ಮುಂದಿನ ಕ್ರಮವುಂಟಾಗಿಲ್ಲ. ಹೊಳೆಯಲ್ಲಿ ನೀರು ಕಡಿಮೆಯಾದುದರಿಂದ ಮಣ್ಣು ತುಂಬಿಸಿ ತಾತ್ಕಾಲಿಕ ವ್ಯವಸ್ತೆ ಏರ್ಪಡಿಸಬೇಕೆಂದು ಕ್ರಿಯಾ ಸಮಿತಿ ಒತ್ತಾಯಿಸುತ್ತಿದೆ. ಇಲ್ಲದಿದ್ದಲ್ಲಿ ಕುಂಬಳೆ ಪಂಚಾಯತ್ ಕಚೇರಿ ಹಾಗೂ ಕಲೆಕ್ಟರೇಟ್ ಮುಂದೆ ಪ್ರತಿಭಟನೆ ನಡೆಸಲು ಕ್ರಿಯಾ ಸಮಿತಿ ನಿರ್ಧರಿಸಿದೆ. ಕ್ರಿಯಾ ಸಮಿತಿಯ ಚೆಯರ್‌ಮೆನ್ ಆಗಿ ಹನೀಫ್ ಮಳಿ, ಅಧ್ಯಕ್ಷರಾಗಿ ಯೋಗೇಶ್ ಭಟ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಹ್ಮಾನ್, ಉಪಾಧ್ಯಕ್ಷರಾಗಿ ಗಂಗಾಧರ, ಮುಸ್ತಫ, ಜೊತೆ ಕಾರ್ಯದರ್ಶಿಗಳಾಗಿ ರಮೇಶ್ ರೈ, ಲತೀಫ್ ಕೊಡ್ಯಮ್ಮೆ ಎಂಬಿವರನ್ನು ಆರಿಸಲಾಗಿದೆ.

RELATED NEWS

You cannot copy contents of this page