ಮೊಗ್ರಾಲ್ ಹೊಳೆಯಲ್ಲಿ ಬಚ್ಚಿಟ್ಟ 10 ದೋಣಿಗಳನ್ನು ಪತ್ತೆಹಚ್ಚಿ ನಾಶಗೊಳಿಸಿದ ಪೊಲೀಸ್: ಅನಧಿಕೃತ ಹೊಯ್ಗೆ ಸಂಗ್ರಹ ವಿರುದ್ಧ ಕಠಿಣ ಕ್ರಮ

ಕುಂಬಳೆ: ಹೊಳೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಅನಧಿಕೃತವಾಗಿ ಹೊಯ್ಗೆ  ಸಂಗ್ರಹಿಸಿ, ಸಾಗಾಟ ದಂಧೆಯೂ ವ್ಯಾಪಕಗೊಂ ಡಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಕುಂಬಳೆ ಪೊಲೀಸರು ಕಠಿಣ ಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಇದರಂತೆ ಇಂದು ಮುಂಜಾನೆ ಡಿವೈಎಸ್ಪಿ ಕೆ. ಸುನಿಲ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮೊಗ್ರಾಲ್ ಹೊಳೆಯ ಕೊಪ್ಪಳ ಅಳಿವೆ ಬಾಗಿಲಿನಲ್ಲಿ ಅನಧಿಕೃತವಾಗಿ ಹೊಯ್ಗೆ ಸಂಗ್ರಹಕ್ಕೆ ಬಳಸುವ ಹತ್ತು ದೋಣಿಗಳನ್ನು ಪತ್ತೆಹಚ್ಚಲಾಗಿದೆ. ಈಪೈಕಿ ಹಲವು ದೋಣಿಗಳನ್ನು ನೀರಿನೊಳಗೆ ಮುಳುಗಿಸಿಡಲಾಗಿತ್ತು. ಅವುಗಳನ್ನು ಮೇಲಕ್ಕೆತ್ತಿ ದಡಕ್ಕೆ ತಲುಪಿಸಿ ಬಳಿಕ ಜೆಸಿಬಿ ಬಳಸಿ ನಾಶಗೊಳಿಸ ಲಾಯಿತು. ಡಿವೈಎಸ್ಪಿ ಜೊತೆಗೆ ಕುಂಬಳೆ ಠಾಣೆ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಪ್ರೊಬೆಶನರಿ ಎಸ್‌ಐ ಆನಂದಕೃಷ್ಣನ್, ಎಎಸ್‌ಐ ಮನೋಜ್, ಡಿವೈಎಸ್ಪಿಯ ಸ್ಟ್ರೆಕರ್ ಪಾರ್ಟಿಯೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಹೊಳೆಗಳಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹ, ಸಾಗಾಟ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ ಇತ್ತೀಚೆಗೆ ಕುಂಬಳೆ ಠಾಣೆಗೆ ಭೇಟಿ ನೀಡಿದ್ದು, ಈ ವೇಳೆ ಅನಧಿಕೃತ ಹೊಯ್ಗೆ ಸಹಿತ ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ನಿರ್ದೇಶ ನೀಡಿದ್ದಾರೆ.

You cannot copy contents of this page