ಯುವತಿಯ ಜೊತೆ ವಳಪಟ್ಟಣಂ ಹೊಳೆಗೆ ಹಾರಿದ ಯುವಕನ ಮೃತದೇಹ ಪತ್ತೆ

ಕಣ್ಣೂರು: ಯುವತಿಯ ಜೊತೆ ವಳಪಟ್ಟಣಂ ಹೊಳೆಗೆ ಹಾರಿದ ಯುವಕನ ಮೃತದೇಹ ದಡ ಸೇರಿದೆ. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪನೆಯಾಲ ಪೆರಿಯಾಟಡ್ಕ ನಿವಾಸಿ ರಾಜು ಅಲಿಯಾಸ್ ರಾಜೇಶ್ (35)ನ ಮೃತದೇಹ ಇಂದು ಬೆಳಿಗ್ಗೆ ಪಳಯಂಗಾಡಿ ಮಾಟುಲ್ ಕಡಪ್ಪುರದಲ್ಲಿ ಕಂಡು ಬಂದಿದೆ. ಸಂಬಂಧಿಕರು ಸ್ಥಳಕ್ಕೆ ತಲುಪಿ ರಾಜುನ ಮೃತದೇಹವೆಂದು ಖಚಿತಪಡಿಸಿದ್ದಾರೆ. ಬೇಕಲ ಎಸ್‌ಐ ಸವ್ಯಸಾಚಿಯವರ ನೇತೃತ್ವದಲ್ಲಿರುವ ಪೊಲೀಸ್ ತಂಡ ಸ್ಥಳಕ್ಕೆ ತಲುಪಿದೆ. ಆದಿತ್ಯವಾರ ಬೆಳಿಗ್ಗೆ ರಾಜು ಹಾಗೂ ವಿವಾಹಿತೆ ಯುವತಿ  ಪೆರಿಯಾಟ ಡ್ಕದಿಂದ ನಾಪತ್ತೆಯಾಗಿದ್ದರು. ತನಿಖೆ ನಡೆಸುತ್ತಿದ್ದ ಮಧ್ಯೆ ಸೋಮವಾರ ಮುಂಜಾನೆ ಯುವತಿಯನ್ನು ವಳಪಟ್ಟಣ ಹೊಳೆಯಿಂದ ಪರಿಸರ ನಿವಾಸಿಗಳು ರಕ್ಷಿಸಿದ್ದಾರೆ. ಬೇಕಲ ಪೊಲೀಸರು ಬಳಿಕ ಯುವತಿಯನ್ನು ಕಸ್ಟಡಿಗೆ ತೆಗೆದು ವಿಚಾರಣೆ ನಡೆಸಿದ್ದರು. ಈ ವೇಳೆ ತಾನು ಹಾಗೂ ರಾಜು ಆದಿತ್ಯ ವಾರ ಮನೆಯಿಂದ ಹೊರಟು ಇಲ್ಲಿಗೆ ತಲುಪಿರುವುದಾಗಿಯೂ, ರಾತ್ರಿ ೧೨ ಗಂಟೆಗೆ ಹೊಳೆಗೆ ಹಾರಿರುವುದಾಗಿಯೂ ತಿಳಿಸಿದ್ದಳು. ಬಳಿಕ ನ್ಯಾಯಾಲ ಯಕ್ಕೆ ಹಾಜರುಪಡಿಸಿದ ಯುವತಿಯನ್ನು ಸ್ವಂತ ಇಷ್ಟಾನುಸಾರ ತೆರಳಲು ನ್ಯಾಯಾಲಯ ಒಪ್ಪಿಗೆ ನೀಡಿದ್ದು, ಯುವತಿ ಪತಿಯೊಂದಿಗೆ ತೆರಳಿದ್ದಳು.

You cannot copy contents of this page