ಯುವತಿಯನ್ನು ಲಾಡ್ಜ್‌ಗೆ ಕರೆದೊಯ್ದು ಕಿರುಕುಳ: ಗಲ್ಫ್‌ಗೆ ಹೋದ ಯುವಕ ದೃಶ್ಯಗಳನ್ನು ಸ್ನೇಹಿತರಿಗೆ ರವಾನೆ; ಆರೋಪಿ ಬಂಧನಕ್ಕೆ ಕ್ರಮ

ಕಾಸರಗೋಡು:  ಸ್ನೇಹದಲ್ಲಿದ್ದ 20ರ ಹರೆಯದ ಯುವತಿಯನ್ನು ಮಂಗಳೂರಿನ ಲಾಡ್ಜ್‌ಗೆ ಕರೆದೊಯ್ದು ಕಿರುಕುಳ ನೀಡಿದ ಯುವಕ ಆ ದೃಶ್ಯಗಳನ್ನು ಸ್ನೇಹಿತರಿಗೆ ರವಾನಿಸಿದ ಬಗ್ಗೆ  ಆರೋಪವುಂಟಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಯುವತಿ ನೀಡಿದ ದೂರಿನಂತೆ ಜಯಕೃಷ್ಣನ್ ಯಾನೆ ಅಪ್ಪು ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಪ್ರಸ್ತುತ ಗಲ್ಫ್‌ನಲ್ಲಿರುವ ಈತನನ್ನು  ಊರಿಗೆ  ತಲುಪಿಸಿ ಬಂಧಿಸಲು ಪೊಲೀಸರು ಕ್ರಮ ಆರಂಭಿಸಿದ್ದಾರೆ.  ೨೦೨೪ ಫೆಬ್ರವರಿ ೪ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಯುವತಿಯನ್ನು ಮಂಗಳೂರಿಗೆ ಕರೆದೊಯ್ದ ಜಯಕೃಷ್ಣನ್ ಲಾಡ್ಜ್ ವೊಂದರಲ್ಲಿ ಕೊಠಡಿ ಪಡೆದು ಅಲ್ಲಿ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಿರುಕುಳ ದೃಶ್ಯಗಳನ್ನು ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿರುವುದಾಗಿಯೂ ದೂರಲಾಗಿದೆ. ಅನಂತರ ಜಯಕೃಷ್ಣನ್ ಗಲ್ಫ್‌ಗೆ ತೆರಳಿದ್ದಾನೆ. ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್ ಮೂಲಕ ಕಿರುಕುಳದ ದೃಶ್ಯಗಳನ್ನು ಪ್ರಚಾರ ಮಾಡಿದ್ದಾನೆ. ಈ ಹಿಂದೆಯೂ ಕಿರುಕುಳ ದೃಶ್ಯಗಳನ್ನು ಕೆಲವು ಸ್ನೇಹಿತರಿಗೂ ಜಯಕೃಷ್ಣನ್ ಕಳುಹಿಸಿಕೊಟ್ಟಿರುವುದಾಗಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯುವತಿ ವೆಳ್ಳರಿಕುಂಡ್ ಪೊಲೀಸರಿಗೆ ದೂರು ನೀಡಿದ್ದಾಳೆ.

You cannot copy contents of this page