ಯುವಮೋರ್ಛಾ ನೇತಾರ, ತಂದೆಯ ನಿಗೂಢ ಸಾವು: ನಾಲ್ಕು ಮಂದಿ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಕೇಸು ದಾಖಲು
ಕುಂಬಳೆ: ನಾಪತ್ತೆಯಾಗಿದ್ದ ಯುವ ಮೋರ್ಛಾ ನೇತಾರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಕೆಲವೇ ದಿನಗಳಲ್ಲಿ ತಂದೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೈದ ಘಟನೆಗೆ ಸಂಬಂಧಿಸಿ ಉಳ್ಳಾಲ ಠಾಣೆ ಪೊಲೀಸರು ನಾಲ್ಕು ಮಂದಿ ವಿರುದ್ದ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಮೃತಪಟ್ಟ ಕುಂಬಳೆ ಬಳಿಯ ಬಂಬ್ರಾಣ ಕಲ್ಕುಳ ಮೂಸ ಕ್ವಾರ್ಟರ್ಸ್ ನಿವಾಸಿ ಲೋಕನಾಥ್ರ ಸಹೋದರ ತೊಕ್ಕೋಟ್ ಮಂಚಿಲದಲ್ಲಿ ವಾಸಿಸುವ ಸುಧಾಕರ ಎಂಬವರು ನೀಡಿದ ದೂರಿನ ಪ್ರಕಾರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಬಂಬ್ರಾಣ ಆರಿಕ್ಕಾಡಿ ಪಳ್ಳದ ಸಂದೀಪ್ (೩೯), ಲೋಕನಾಥರ ಪತ್ನಿ ಕಲ್ಕುಳ ಮೂಸ ಕ್ವಾರ್ಟರ್ಸ್ನಲ್ಲಿ ವಾಸಿಸುವ ಪ್ರಭಾವತಿ (೪೯), ಪುತ್ರ ಶುಭಂ (೨೫), ಪ್ರಭಾವತಿಯ ಸಹೋದರಿ ಬಂಟ್ವಾಳ ಮೊಂಟೆಪದವು ನರಿಂಗಾನದ ಬೇಬಿ ಯಾನೆ ಭಾರತಿ (೩೫) ಎಂಬಿವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇವರ ಪ್ರೇರಣೆಯಿಂದ ಲೋಕನಾಥ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರುಗಾರನಾದ ಸುಧಾಕರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತಾಗಿ ಶಬ್ದ ಸಂದೇಶದಲ್ಲಿ ತಿಳಿಸಿರುವುದಾಗಿಯೂ ತಿಳಿಸಲಾಗಿದೆ. ಲೋಕನಾಥ ಎರಡು ದಿನಗಳ ಹಿಂದೆ ಉಳ್ಳಾಲ ಸೋಮೇಶ್ವರ ಸಮುದ್ರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇವರ ಪುತ್ರನೂ, ಯುವಮೋರ್ಛಾ ಕುಂಬಳೆ ಮಂಡಲ ಸಮಿತಿ ಉಪಾಧ್ಯಕ್ಷರಾದ ರಾಜೇಶ್ (೩೦) ಕಳೆದ ತಿಂಗಳ ೧೦ರಂದು ನಾಪತ್ತೆಯಾಗಿ ಬಳಿಕ ೧೨ರಂದು ಉಳ್ಳಾಲ ಬಂಗರ ಸಮುದ್ರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.ರಾಜೇಶ್ರ ಸಾವಿನಲ್ಲಿ ನಿಗೂಢತೆ ಗಳಿವೆಯೆಂದೂ ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ನಾಗರಿಕರು ಕ್ರಿಯಾ ಸಮಿತಿ ರೂಪೀಕರಿಸಿದ್ದರು. ಅಲ್ಲದೆ ರಾಜೇಶ್ರ ಸಾವಿನ ಕುರಿತು ತನಿಖೆ ನಡೆಸಬೇಕೆಂದು ಆಗ್ರಹಿಸಿ ಲೋಕನಾಥ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಇದರಂತೆ ಹೇಳಿಕೆ ದಾಖಲಿಸಲು ಪೊಲೀಸರು ಬರಹೇಳಿದ ದಿನದಂದು ಲೋಕನಾಥ ಸಮುದ್ರದಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಾವಿಗೀಡಾಗುವ ಮುಂಚೆ ಸಾವಿಗೆ ಹೊಣೆಗಾರರೆಂದು ತಿಳಿಸುವ ಶಬ್ದ ಸಂದೇಶಗಳನ್ನು ಸ್ನೇಹಿತರಿಗೆ ಕಳುಹಿಸಿಕೊಟ್ಟಿದ್ದಾರೆ