ಯೂತ್ ಕಾಂಗ್ರೆಸ್ ನೇತಾರ ಬಾಲಕೃಷ್ಣನ್ ಕೊಲೆ ಪ್ರಕರಣ: ಜೀವಾವಧಿ ಸಜೆಗೊಳಗಾದ ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿ ಹೈಕೋರ್ಟ್ ತೀರ್ಪು

ಕಾಸರಗೋಡು: ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವತಿಯನ್ನು ಮದುವೆಯಾದ ಯೂತ್ ಕಾಂಗ್ರೆಸ್‌ನ ಕಾಸರಗೋಡು ಮಂಡಲ ಅಧ್ಯಕ್ಷರಾಗಿದ್ದ ಕಾಸರಗೋಡು ಸೂರ್ಲು ಉಮಾ ನರ್ಸಿಂಗ್ ಬಳಿ ನಿವಾಸಿ ಹಾಗೂ ಬಳಿಕ ವಿದ್ಯಾನಗರ ಪಡುವಡ್ಕಕ್ಕೆ ವಾಸ ಬದಲಾಯಿಸಿದ್ದ ಬಾಲಕೃಷ್ಣನ್ (28)ರನ್ನು ಕೊಲೆಗೈದ ಪ್ರಕರಣದ ಇಬ್ಬರು ಆರೋಪಿಗಳಿಗೆ ಎರ್ನಾಕುಳಂನ ವಿಶೇಷ ಸಿಬಿಐ ನ್ಯಾಯಾಲಯ ಈ ಹಿಂದೆ ವಿಧಿಸಿದ್ದ ಜೀವಾವಧಿ ಸಜೆಯನ್ನು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ ರದ್ದುಪಡಿಸಿ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.

ಕಾಸರಗೋಡು ಚಟ್ಟಂಚಾಲ್ ಕುನಿಕುನ್ನು ಪಾದೂರು ರಸ್ತೆ ಬಳಿಯ ಮುಹಮ್ಮದ್ ಇಕ್ಬಾಲ್ (ಇಕ್ಕು) ಮತ್ತು ಕಾಸರಗೋಡು ತಳಂಗರೆ ನಿವಾಸಿ ಮುಹಮ್ಮದ್ ಹನೀಫ್ (ಜಾಕಿ ಹನೀಫ್) ಎಂಬವರು ಕ್ರಮವಾಗಿ ಈ ಕೊಲೆ ಪ್ರಕರಣದ ಒಂದನೇ ಮತ್ತು ಎರಡನೇ ಆರೋಪಿಗಳಾಗಿದ್ದು ಇವರನ್ನು ನ್ಯಾಯಮೂರ್ತಿ ರಾಜಾ ವಿಜಯ ರಾಘವನ್ ಮತ್ತು ನ್ಯಾಯಮೂರ್ತಿ ಪಿ.ವಿ. ಬಾಲಕೃಷ್ಣನ್ ಎಂಬವರನ್ನೊಳ ಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ ಖುಲಾಸೆಗೊಳಿಸಿ ತೀರ್ಪು ನೀಡಿದೆ.

ಆರೋಪಿಗಳು ಅಪರಾಧವೆಸಗಿ ದ್ದಾರೆ ಎಂಬುದನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ಪ್ರೋಸಿಕ್ಯೂಷನ್‌ಗೆ ಸಾಧ್ಯವಾಗಿಲ್ಲವೆಂದೂ ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ. ಆ ಹಿನ್ನೆಲೆಯಲ್ಲಿ ಆರೋಪಿಗಳ ಮೇಲಿನ ಆರೋಪಗಳನ್ನು ಹಾಗೂ ಶಿಕ್ಷೆಯನ್ನು ನ್ಯಾಯಾಲಯ ರದ್ದುಪಡಿಸಿದೆ.

ಉಪ್ಪಳ ನಿವಾಸಿಯಾಗಿರುವ ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವತಿಯೋರ್ವಳನ್ನು ಯೂತ್ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಬಾಲಕೃಷ್ಣ ಪ್ರೀತಿಸಿ ಬಳಿಕ ಆಕೆಯನ್ನು ತಮಿಳುನಾಡಿನ ಮೇಟ್ಟುಪಾಳದಲ್ಲಿ ಮದುವೆಯಾಗಿ  ಕಾಸರಗೋಡಿಗೆ ಹಿಂತಿರುಗಿದ್ದರು. ಆ ಬಳಿಕ ೨೦೦೧ ಸೆಪ್ಟಂಬರ್ 18ರಂದು ಬಾಲಕೃಷ್ಣನ್‌ರನ್ನು ಕೊಲೆಗೈಯ್ಯಲಾಗಿತ್ತು.

ಬಾಲಕೃಷ್ಣನ್‌ರನ್ನು ಆರೋಪಿಗಳಿ ಬ್ಬರು ನಗರದ ನುಳ್ಳಿಪ್ಪಾಡಿಯಿಂದ ಉಪಾಯದಿಂದ ಕಾರಿನಲ್ಲಿ ನಗರದ ಪಿಲಿಕುಂಜೆ ಚಂದ್ರಗಿರಿ ಸೇತುವೆಯ ಕಡ ವಿಗೆ ಕರೆದೊಯ್ದು, ಅಲ್ಲಿ ಬಾಲಕೃಷ್ಣನ್ ರನ್ನು ಇರಿದು ಕೊಲೆಗೈದಿದ್ದರೆಂದು ಆರೋಪಿಸಲಾಗಿತ್ತು.

ಗಂಭೀರ ಇರಿತಕ್ಕೊಳಗಾಗಿ ಪ್ರಾಣ ರಕ್ಷಣಾರ್ಥ ಬಾಲಕೃಷ್ಣನ್ ಅಲ್ಲಿಂದ ಸ್ವಲ್ಪದೂರ ಓಡಿ ಹೋಗಿ ಕುಸಿದು ಬಿದ್ದು, ಅದನ್ನು ಕಂಡ ಕೆಲವರು ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿ ದರೂ ಅದು ಫಲಕಾರಿಯಾಗದೆ ಬಾಲ ಕೃಷ್ಣನ್ ಆಸ್ಪತ್ರೆಯಲ್ಲಿ ಅಸುನೀಗಿದ್ದರು.

ಈ ಕೊಲೆ ಪ್ರಕರಣದ ಬಗ್ಗೆ ಮೊದಲು ಲೋಕಲ್ ಪೊಲೀಸರು ತನಿಖೆ ನಡೆಸಿದ್ದರು. ನಂತರ ಅದನ್ನು ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸ ಲಾಗಿತ್ತು. ಪ್ರಸ್ತುತ ಕೊಲೆಗೆ ಸಂಬಂಧಿಸಿ ಸಿಬಿಐ ಒಟ್ಟು ಐದು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ಅದರಲ್ಲಿ ಮೂವರು ಆರೋಪಿಗಳ ಮೇಲಿನ ಆರೋಪಗಳು ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ಸಿಬಿಐ ನ್ಯಾಯಾಲಯ ಅವರನ್ನು ಈ ಹಿಂದೆ ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಇತರ ಇಬ್ಬರು ಆರೋಪಿಗಳಾದ ಇಕ್ಬಾಲ್ ಮತ್ತು ಹನೀಫಾರಿಗೆ ಜೀವಾವಧಿ ಸಜೆ ವಿಧಿಸಿ ತೀರ್ಪು ನೀಡಿತ್ತು. ಆ ತೀರ್ಪಿನ ವಿರುದ್ಧ ಈ ಇಬ್ಬರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ಹೈಕೋರ್ಟ್‌ನ ವಿಭಾಗೀಯ ಪೀಠ ಆ ಇಬ್ಬರು ಆರೋಪಿಗಳನ್ನು ಕೊನೆಗೆ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.

RELATED NEWS

You cannot copy contents of this page