ರಸ್ತೆ ದಾಟುತ್ತಿದ್ದ ವ್ಯಕ್ತಿ ಕಾರು ಢಿಕ್ಕಿ ಹೊಡೆದು ಮೃತ್ಯು
ಮಂಜೇಶ್ವರ: ರಸ್ತೆ ದಾಟುತ್ತಿದ್ದ ವ್ಯಕ್ತಿ ಕಾರು ಢಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ಮೂಲತಃ ಮೀಯಪದವು ಕುಳಬೈಲು ನಿವಾಸಿಯೂ, ಪ್ರಸ್ತುತ ಮಂಜೇಶ್ವರ ಬಳಿ ಕೆದುಂಬಾಡಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಜಯಂತ (48) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಕೂಲಿ ಕಾರ್ಮಿಕರಾಗಿದ್ದರು. ನಿನ್ನೆ ಸಂಜೆ ಮಂಜೇಶ್ವರ ರಾಗಂ ಜಂಕ್ಷನ್‌ನಲ್ಲಿ ಅಪಘಾತವುಂಟಾಗಿದೆ. ಯಾವುದೋ ಅಗತ್ಯಕ್ಕಾಗಿ ಹೊಸಂಗಡಿಗೆ ಹೋಗಿದ್ದ ಜಯಂತ ಅಲ್ಲಿಂದ ಬಸ್‌ನಲ್ಲಿ ಮರಳಿ ಮಂಜೇಶ್ವರದಲ್ಲಿ ಇಳಿದಿದ್ದರು. ಬಳಿಕ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದಾಗ ಕಾಸರಗೋಡು ಭಾಗದಿಂದ ತಲಪಾಡಿಯತ್ತ ತೆರಳುತ್ತಿದ್ದ ಕಾರು ಇವರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಜಯಂತರನ್ನು ಕೂಡಲೇ ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ದಿ| ಬಾಬು ಎಂಬವರ ಪುತ್ರನಾದ ಮೃತರು ತಾಯಿ ಕಮಲ, ಪತ್ನಿ ಸವಿತ ಹಾಗೂ ಯತೀಶ್, ಯಶ್ವಿನ್ ಸಹಿತ ಮೂವರು ಮಕ್ಕಳು, ಸಹೋದರಿ ಬೇಬಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಅಪಘಾತ ಸಂಬಂಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ, ಕಾರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.