ರಸ್ತೆ ಬದಿ ಗಂಭೀರ ಗಾಯಗೊಂಡ ವ್ಯಕ್ತಿ ಸಾವು: ಅಂತ್ಯಕ್ರಿಯೆ ಬಳಿಕ ಪರಿಶೀಲನೆಯಲ್ಲಿ ಬೈಕ್ ಢಿಕ್ಕಿ ಹೊಡೆದಿರುವುದು ಸಾವಿಗೆ ಕಾರಣವೆಂದು ಪತ್ತೆ
ಕಾಸರಗೋಡು: ರಸ್ತೆ ಬದಿ ಗಂಭೀರ ಗಾಯಗೊಂಡು ಬಳಿಕ ಚಿಕಿತ್ಸೆ ಫಲಕಾರಿ ಯಾಗದೆ ಸಾವನ್ನಪ್ಪಿದ ವ್ಯಕ್ತಿಯ ಅಂತ್ಯಕ್ರಿಯೆ ಬಳಿಕ ನಡೆಸಿದ ಪರಿಶೀಲನೆ ಯಲ್ಲಿ ಆ ವ್ಯಕ್ತಿಯ ಸಾವು ವಾಹನ ಅಪ ಘಾತದಿಂದ ಉಂಟಾಗಿ ರುವುದಾಗಿ ಪತ್ತೆ ಯಾಗಿದ್ದು, ಆಬಗ್ಗೆ ನೀಡಲಾದ ದೂರಿ ನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿ ಸಿದ್ದಾರೆ.
ಮಧೂರು ಕೋಡಿಮಜಲು ನಿವಾಸಿ ಚನಿಯ-ಲೀಲಾ ದಂಪತಿ ಪುತ್ರ, ಕೂಲಿ ಕಾರ್ಮಿಕ ಚಂದ್ರಹಾಸ ಎಂ (49) ಸಾವನ್ನಪ್ಪಿದ ವ್ಯಕ್ತಿ. ಜುಲೈ ೧೮ರಂದು ಸಂಜೆ ಮಧೂರಿಗೆ ಸಮೀಪದ ಪರಕ್ಕಿಲದ ರಸ್ತೆ ಬದಿ ಚಂದ್ರಹಾಸ ಬಿದ್ದು ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಿದ್ದ ಆಘಾತಕ್ಕೆ ಅವರ ತಲೆಗೆ ಏಟು ಬಿದ್ದಿರ ಬಹುದೆಂದು ಮನೆಯವರು ಮೊದಲು ಸಂಶಯಿಸಿದ್ದರು. ನಂತರ ಅವರನ್ನು ಮೊದಲು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮನೆಗೆ ತರಲಾಯಿತು. ಮರುದಿನ ಅವರ ಆರೋಗ್ಯ ಸ್ಥಿತಿ ಗಂಭೀರಾವಸ್ಥೆಗೆ ತಿರುಗಿದಾಗ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ದಾಖಲಿಸಲು ತೀವ್ರ ನಿಗಾ ಘಟಕ ದಲ್ಲಿ ಬೆಡ್ ಖಾಲಿ ಇಲ್ಲದ ಕಾರಣ ನಂತರ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ನಡೆಸಿದ ವೈದ್ಯಕೀಯ ತಪಾಸಣೆ ಯಲ್ಲಿ ತಲೆಯಲ್ಲಿ ವಿಪರೀತ ರಕ್ತಸ್ರಾವ ಉಂಟಾಗಿರುವುದೇ ಗಂಭೀರಾವಸ್ಥೆಗೆ ಕಾರಣವೆಂದು ತಿಳಿಸಲಾಯಿತು. ಆದರೆ ಚಿಕಿತ್ಸೆಗೆ ಅಲ್ಲಿ ಸರ್ಜನ್ ಇಲ್ಲದುದರಿಂದ ಚಂದ್ರ ಹಾಸರನ್ನು ಪುನಃ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಂದು ವೈದ್ಯರು ಪರಿಶೀಲಿ ಸಿದ್ದು, ಸ್ಥಿತಿ ಅತೀ ಗಂಭೀರವಾಗಿದ್ದು ಆದ್ದರಿಂದ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆಂದು ತಿಳಿಸಿದ್ದರು. ಅದರಂತೆ ಚಂದ್ರಹಾಸರನ್ನು ಮನೆಗೆ ತರಲಾಯಿತು. ಜುಲೈ ೨೦ರಂದು ಸಂಜೆ ಅವರು ಮನೆಯಲ್ಲಿ ಮೃತಪಟ್ಟರು. ಅಂತ್ಯಸಂಸ್ಕಾರವನ್ನು ಮರುದಿನ ನಡೆಸಲಾಯಿತು. ಅದಾದ ಬಳಿಕ ಚಂದ್ರಹಾಸರು ಏಟು ತಗಲಿ ಬಿದ್ದಿದ್ದ ಪರಕ್ಕಿಲ ಬಳಿಯ ಮನೆಯೊಂದರ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಅವರಿಗೆ ಬೈಕ್ ಢಿಕ್ಕಿ ಹೊಡೆದು ನೆಲದಲ್ಲಿ ಬಿದ್ದ ದೃಶ್ಯ ಗೋಚರಿಸಿದೆ. ಬಳಿಕವಷ್ಟೇ ಬೈಕ್ ಅಪಘಾ ತವೇ ಸಾವಿಗೆ ಕಾರಣವೆಂಬ ಸತ್ಯ ಬಯಲು ಗೊಂಡಿತು. ಸಿಸಿ ಟಿವಿ ದೃಶಗಳ ಪರಿಶೀಲನೆ ಬಳಿಕ ಮನೆಯವರು ಆ ದೃಶ್ಯಗಳ ಸಹಿತ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದರು. ಅದರಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಚಂದ್ರಹಾಸರಿಗೆ ಢಿಕ್ಕಿ ಹೊಡೆದ ಬೈಕ್ ಮತ್ತು ಸವಾರನ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಆರಂಭಿಸಿದ್ದಾರೆ.