ರಾಜ್ಯದ ಕೃಷಿಕರಿಗೆ ಗುರುತು ಚೀಟಿ ವಿತರಣೆ: ಉದ್ಘಾಟನೆ 9ರಂದು
ಕಾಸರಗೋಡು: ರಾಜ್ಯದ ಎಲ್ಲಾ ಕೃಷಿಕರಿಗೂ ಭಾವಚಿತ್ರ ಲಗತ್ತಿಸಿದ ಗುರುತು ಚೀಟಿ ಲಭಿಸಲಿದೆ. ಕೃಷಿ ಇಲಾಖೆ ಇಂತಹವೊಂದು ನಿರ್ಧಾರ ಕೈಗೊಂಡಿದ್ದು, ಇದರಿಂದ ಕೃಷಿಕರಿಗೆ ಹೆಚ್ಚಿನ ಪ್ರಯೋಜನ ಲಭಿಸಬಹುದೆಂದು ನಿರೀಕ್ಷಿಸಲಾಗಿದೆ. ಹಲವು ವೆಬ್ ಸೈಟ್ಗಳಲ್ಲಿ ಕೃಷಿಕರು ಹೆಸರು ನೋಂದಾಯಿಸಿದ್ದಾರಾದರೂ, ಇದೇ ಮೊದಲ ಬಾರಿಗೆ ಕಾರ್ಡ್ ವಿತರಣೆಯಾಗಲಿದೆ.
ಕೃಷಿ ಇಲಾಖೆಯ ಕದಿರ್ ಆಪ್ (KATHIRA), ಏಮ್ಸ್ ಪೋರ್ಟಲ್ (www.aims.kerala.gov.in) ಎಂಬಿವುಗಳಲ್ಲಿ ಹೆಸರು ನೋಂದಾಯಿಸಿದ ಕೃಷಿಕರಿಗೆ ಕಾರ್ಡ್ ಲಭಿಸಲಿದೆ. ಸರಕಾರದ ನೂರು ದಿನ ಕ್ರಿಯಾಯೋಜನೆಗೆ ಸಂಬಂಧಿಸಿ ನಡೆಯುವ ಕಾರ್ಯಕ್ರಮದಲ್ಲಿ ಈ ತಿಂಗಳ 9ರಂದು ಕಾರ್ಡ್ ವಿತರಣೆ ನಡೆಸಲು ನಿರ್ಧರಿಸಲಾಗಿದೆ. ಕದಿರ್ ಆಪ್ ಹಾಗೂ ಏಮ್ಸ್ ಪೋರ್ಟಲ್ಗೆ ನೋಂದಾವಣೆ ಕಾರ್ಡ್ ಲಿಂಕ್ ಮಾಡಿರಬೇಕು. ಕದಿರ್ ಆಪ್ ಮೊಬೈಲ್ ಫೋನ್ನಲ್ಲಿ ಡೌನ್ಲೋಡ್ ಮಾಡಬೇಕಾಗಿದೆ. ಏಮ್ಸ್ ಪೋರ್ಟಲ್ನಲ್ಲಿ 42.14 ಲಕ್ಷ ಮಂದಿ ಹೆಸರು ನೋಂದಾಯಿಸಿದ್ದರೂ ಕೃಷಿ ಭೂಮಿ ಕುರಿತಾಗಿ ಮಾಹಿತಿಗಳನ್ನು ಕೇವಲ ೨೫ ಸಾವಿರ ಮಂದಿ ನೀಡಿದ್ದಾರೆ. ಹೀಗೆ ಪೂರ್ಣ ಮಾಹಿತಿ ನೀಡಿದವರಿಗೆ ಮೊದಲ ಹಂತದಲ್ಲಿ ಗುರುತು ಚೀಟಿ ಲಭಿಸುವುದು.