ರಾಮಮಂದಿರದಂತಹ ವಿವಾದ ವಿಷಯಗಳು ಇತರ ಕಡೆಗಳಲ್ಲಿ ಉಂಟಾಗಬಾರದು- ಮೋಹನ್ ಭಾಗವತ್

ಪುಣೆ: ದೇಶದ ವಿವಿಧ ಭಾಗಗಳಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕೆ ಸಮಾನವಾದ ಹಕ್ಕು ಮಂಡಿಸುತ್ತಿರುವು ದರ ವಿರುದ್ಧ ಆರ್‌ಎಸ್‌ಎಸ್ ಮೇಧಾವಿ ಮೋಹನ್ ಭಾಗವತ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಹಿಂದೂ ಮುಖಂಡರು ವಿವಿಧ ಸ್ಥಳಗಳಲ್ಲಿ ರಾಮಕ್ಷೇತ್ರದಂತಹ ವಿವಾದಗಳನ್ನು  ಮುಂದಿಡುವುದು ಸ್ವೀಕಾರಾರ್ಹವಾದ ರೀತಿಯಲ್ಲವೆಂದು ಅವರು ನುಡಿದರು. ವಿಭಿನ್ನ ವಿಶ್ವಾಸಗಳಿಗೆ, ತತ್ವಶಾಸ್ತ್ರಗಳಿಗೆ ಹೇಗೆ ಹೊಂದಿಕೊಂಡು ಜೀವಿಸಬಹುದು ಎಂಬುದಕ್ಕೆ ಭಾರತ ಒಂದು ಮಾದರಿಯಾಗಿ ಇರಬೇಕೆಂದು ಪುಣೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು ನುಡಿದರು.

ಉತ್ತರಪ್ರದೇಶದ ಸಂಬಲ್‌ನ ಶಾಹಿ ಜುಮಾ ಮಸೀದಿ, ರಾಜಸ್ಥಾನಿನ ಅಜ್ಮೀರ್ ಶರೀಫ್ ಮೊದಲಾದ ಸ್ಥಳಗಳ ಹೊಸ ವಿವಾದಗಳ ಹಿನ್ನೆಲೆಯಲ್ಲಿ ಮೋಹನ್ ಭಾಗವತ್ ಈ ಹೇಳಿಕೆ ನೀಡಿದ್ದಾರೆ.

ನಾವು ಬಹಳ ವರ್ಷದಿಂದ ಸೌಹಾರ್ದಪರವಾಗಿ ಜೀವಿಸುತ್ತಿದ್ದೇವೆ. ಭಾರತೀಯರು ವಿವಾದ ವಿಷಯಗಳನ್ನು ಕೈಬಿಡುತ್ತಾರೆ. ಈ ಹಿಂದಿನ ತಪ್ಪುಗಳಿಂದ ಪಾಠ ಕಲಿತುಕೊಂಡು ತಮ್ಮ ದೇಶವನ್ನು ವಿಶ್ವದಲ್ಲಿ ಮಾದರಿ ದೇಶವಾಗಿ ಬದಲಿಸಲು ಪ್ರಯತ್ನಿಸಬೇಕು. ರಾಮಕ್ಷೇತ್ರದ ನಿರ್ಮಾಣದ ಬಳಿಕ ಸಮಾನವಾದ ಸಮಸ್ಯೆಗಳನ್ನು ಮುಂದಿಟ್ಟು ಹಿಂದೂಗಳ ಮುಖಂಡರಾಗ ಬಹುದೆಂದು ಕೆಲವರು ಅಂದುಕೊಂಡಿದ್ದಾರೆ. ಆದರೆ ಇದು ಸ್ವೀಕಾರಾರ್ಹವಲ್ಲ ಎಂದು ಭಾಗವತ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಇದೇ ವೇಳೆ ರಾಮಕ್ಷೇತ್ರ ನಂಬುಗೆಯ ವಿಷಯವಾಗಿದೆ ಎಂದು ಅವರು ನುಡಿದರು. ಅದನ್ನು ನಿರ್ಮಿಸಲು ಹಿಂದೂಗಳು ಆಗ್ರಹಿಸಿದ್ದರು. ದ್ವೇಷದ, ಶತ್ರುತ್ವದ ಹೆಸರಲ್ಲಿ ಇತರ ಕಡೆಗಳಲ್ಲಿ  ವಿವಾದವುಂಟುಮಾಡುವುದು ಅಂಗೀಕರಿಸಲು ಸಾಧ್ಯವಿಲ್ಲ. ಭಾರತದಲ್ಲಿ ಬಹುಮತೀಯರು, ಅಲ್ಪಸಂಖ್ಯಾತರು ಎಂಬುದಿಲ್ಲ. ಎಲ್ಲರೂ ಒಂದೇ. ಇತರ ಧರ್ಮಗಳನ್ನು ಆಕ್ಷೇಪಿಸುವುದು ನಮ್ಮ ಸಂಸ್ಕಾರವಲ್ಲ. ಎಲ್ಲರಿಗೂ ಅವರವರ ವಿಶ್ವಾಸ ಪ್ರಕಾರ ಆರಾಧಿಸಲು ಸಾಧ್ಯವಾಗಬೇಕೆಂದು ಅವರು ನುಡಿದರು.

Leave a Reply

Your email address will not be published. Required fields are marked *

You cannot copy content of this page