ರೈಲು ಹಳಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಇನ್ನೋರ್ವ ಯುವಕ ಬದಿಯಡ್ಕ ನಿವಾಸಿ
ಕಾಸರಗೋಡು: ನಗರದ ಪಳ್ಳ ರೈಲು ಹಳಿಯಲ್ಲಿ ನಿನ್ನೆ ಮುಂಜಾನೆ ರೈಲುಗಾಡಿ ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಇಬ್ಬರು ಯುವಕರ ಪೈಕಿ ಇನ್ನೋರ್ವನ ಗುರುತು ಪತ್ತೆಹಚ್ಚಲಾಗಿದೆ.
ಬದಿಯಡ್ಕ ಬೀಜಂತ್ತಡ್ಕದಲ್ಲಿ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿ ರುವ ಇಬ್ರಾಹಿಂ-ಸಮೀರಾ ದಂಪತಿ ಪುತ್ರ ನಿಹಾಲ್ (೨೦) ಸಾವನ್ನಪ್ಪಿದ ಯುವಕನಲ್ಲೋರ್ವನಾಗಿದ್ದಾನೆ. ಇನ್ನೋರ್ವ ನೆಕ್ರಾಜೆ ಚೂರಿಪಳ್ಳ ಪೈಕಮೂಲೆಯ ಆಮಿನಾ ಎಂಬವರ ಪುತ್ರ ಮೊಹಮ್ಮದ್ ಸಾಹೀರ್ (೧೯) ಆಗಿರುವುದಾಗಿ ನಿನ್ನೆಯೇ ಪೊಲೀಸರು ಗುರುತುಹಚ್ಚಿದ್ದರು. ಈ ಇಬ್ಬರಪೈಕಿ ಓರ್ವನ ಮೃತದೇಹ ರೈಲು ಹಳಿ ಯಲ್ಲೂ, ಇನ್ನೋರ್ವನ ಮೃತದೇಹ ಹಳಿಯ ಅಲ್ಪ ದೂರ ನಿನ್ನೆ ಮುಂಜಾನೆ ಪತ್ತೆಯಾಗಿತ್ತು.
ಮೃತದೇಹದ ಬಳಿ ಎರಡು ಮೊಬೈಲ್ ಫೋನ್‌ಗಳು ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅದರಲ್ಲಿ ನಿನ್ನೆ ಮುಂಜಾನೆ ನಗರದ ಕೋಟೆರಸ್ತೆ ಬಳಿಯ ಕರಿಪ್ಪೊಡಿ ರಸ್ತೆ ಬಳಿಯ ಕ್ವಾರ್ಟರ್ಸ್ ವೊಂದರಲ್ಲಿ ಕಳವುಗೈಯ್ಯಲ್ಪಟ್ಟ ತಮಿಳು ವಲಸೆ ಕಾರ್ಮಿಕರ ಮೊಬೈಲ್ ಫೋನ್‌ಗಳು ಒಳಗೊಂಡಿವೆಯೆಂದು ಪೊಲೀಸರು ತಿಳಿಸಿದ್ದಾರೆ. ಆ ಬಗ್ಗೆಯೂ ಪೊಲೀಸರು ಇನ್ನೊಂದೆಡೆ ತನಿಖೆ ನಡೆಸುತ್ತಿದ್ದಾರೆ. ರೈಲು ಢಿಕ್ಕಿ ಹೊಡೆದ ಸಾವನ್ನಪ್ಪಿದ ಯುವಕರ ಪೈಕಿ ಮೊಹಮ್ಮದ್ ಸಾಹೀರ್ ಒಂದು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಗೊಂಡು ಹೊರಬಂದಿದ್ದ ವ್ಯಕ್ತಿಯಾಗಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.