ರೈಲುಗಾಡಿಯಲ್ಲಿ ಪ್ರಯಾಣಿಕರ ಸೊತ್ತು ಕಳವು ನಡೆಸುತ್ತಿದ್ದ ಇಬ್ಬರ ಬಂಧನ

ಕಾಸರಗೋಡು: ರೈಲು ಗಾಡಿಗಳಲ್ಲಿ ಪ್ರಯಾಣಿಕರ ಸೊತ್ತುಗಳನ್ನು ಕಳವು ನಡೆಸುತ್ತಿದ್ದ ಇಬ್ಬರನ್ನು ರೈಲ್ವೇ ಪೊಲೀಸರು ಕಯ್ಯಾರೆ ಸೆರೆ ಹಿಡಿದಿದ್ದಾರೆ.

ಪೋರ್ಟ್ ಕೊಚ್ಚಿ ಪುಳಂಗರ ಇಲ್ಲತ್ತ್‌ನ ತನ್ಸೀರ್ (೧೯) ಹಾಗೂ ಕೊಚ್ಚಿ ಮಟ್ಟಂಚೇರಿ ನಿವಾಸಿಯಾದ ೧೭ರ ಹರೆಯದ ಬಾಲಕನನ್ನು ಸೆರೆ ಹಿಡಿಯಲಾಗಿದೆ. ತಿರುವನಂತಪುರದಿಂದ ಮಂಗಳೂರಿಗೆ ತೆರಳುವ ಮಲಬಾರ್ ಎಕ್ಸ್‌ಪ್ರೆಸ್‌ನಲ್ಲಿ ಇಂದು ಮುಂಜಾನೆ ೩.೩೦ರ ವೇಳೆ ಘಟನೆ ನಡೆದಿದೆ.

ರೈಲು ಕಲ್ಲಿಕೋಟೆಗೆ ತಲುಪುತ್ತಿದ್ದಂತೆ ಬಿಡಿಎಸ್ ವಿದ್ಯಾರ್ಥಿಯ ಮೊಬೈಲ್ ಫೋನ್ ಕಳವಿಗೀಡಾಗಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ದೂರು ಲಭಿಸಿದ ಹಿನ್ನೆಲೆಯಲ್ಲಿ ರೈಲ್ವೇಯ ಭದ್ರತಾ ನೌಕರರಾದ ಸುಕೇಶ್ ಹಾಗೂ ಮಹೇಶ್ ತನಿಖೆ ನಡೆಸುತ್ತಿದ್ದಂತೆ ಅದೇ ರೈಲಿನ ಬೇರೊಂದು ಬೋಗಿಯಲ್ಲಿದ್ದ ರೈಲ್ವೇ ಟಿ.ಟಿಯ ಬ್ಯಾಗ್ ಕಳವಿಗೀಡಾಗಿ ರುವುದಾಗಿ ತಿಳಿದು ಬಂದಿದೆ. ಅಲ್ಲದೆ ಮತ್ತೊಂದು ಬೋಗಿಯಲ್ಲಿ ಓರ್ವ ಪ್ರಯಾಣಿಕನ ಪರ್ಸ್ ಕೂಡಾ ಕಳವಿಗೀಡಾಗಿರುವುದಾಗಿ ದೂರು ಲಭಿಸಿದೆ. ಏಕಕಾಲದಲ್ಲಿ ಈ ಮೂರು ಕಳವು ಕೃತ್ಯಗಳು ನಡೆದಿರುವುದರಿಂದ ಕಳ್ಳರು ಇದೇ ರೈಲಿನಲ್ಲಿದ್ದಾರೆಂದು ಖಚಿತಪಡಿಸಿದ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸಿದ್ದಾರೆ. ಎಲ್ಲಾ ಬೋಗಿಗಳಲ್ಲೂ ಶೋಧ ನಡೆಸುತ್ತಿದ್ದಂತೆ ಒಂದು ಬೋಗಿಯ ಶೌಚಾಲಯದ ಬಾಗಿಲು ಮುಚ್ಚಿಕೊಂಡಿತ್ತು. ಅದರೊಳಗೆ ವ್ಯಕ್ತಿಗಳಿರುವುದಾಗಿ ತಿಳಿದು ಬಂದಿದ್ದು, ಆದರೆ ಅದರ ಬಾಗಿಲು ತೆರೆಯಲು ಮುಂದಾಗಲಿಲ್ಲ. ಇದರಿಂದ ಅಲ್ಲಿಯೇ ಪೊಲೀಸರು ಕಾದು ನಿಂತಿದ್ದರೆಂದು ಶೋರ್ನೂರಿಗೆ ತಲುಪಿದಾಗ ಶೌಚಾಲಯದ ಬಾಗಿಲು ತೆರೆದು ಇಬ್ಬರು ಹೊರಗೆ ಬರುತ್ತಿದ್ದಂತೆ ಅವರನ್ನೂ ಪೊಲೀಸರು  ಸೆರೆ ಹಿಡಿದಿದ್ದಾರೆ. ಬಳಿಕ ನಡೆಸಿದ ತನಿಖೆಯಲ್ಲಿ ರೈಲಿನಲ್ಲಿ ಮೂರು ಮಂದಿಯ ಕಳವು ನಡೆಸಿರುವುದು ಇವರೇ ಆಗಿದ್ದಾರೆಂದು ತಿಳಿದು ಬಂದಿದೆ. ಈ ಹಿಂದೆಯೂ ಇವರು ಇದೇ ರೀತಿಯ ಕಳವು ನಡೆಸಿರಬಹುದೆಂಬ ಸಂಶಯ ಮೇರೆಗೆ ಅವರನ್ನು ಸಮಗ್ರ ತನಿಖೆಗೊಳಪಡಿಸಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page