ರೈಲ್ವೇ ಹಳಿ ಮೇಲೆ ತೆಂಗಿನ ಮರ ಬಿದ್ದು ಹೈ ಟೆನ್ಶನ್ ವಿದ್ಯುತ್ ತಂತಿ ಹಾನಿ : ಕಾಸರಗೋಡು-ಮಂಗಳೂರು ರೈಲು ಸಂಚಾರ ಮೊಟಕು

ಕಾಸರಗೋಡು: ರೈಲ್ವೇ ಹಳಿ ಸಮೀಪ ಸ್ಥಾಪಿಸಿದ ಹೈಟೆನ್ಶನ್ ವಿದ್ಯುತ್ ತಂತಿ ಮೇಲೆ ತೆಂಗಿನ ಮರ ಬುಡಸಮೇತ ಮಗುಚಿ ಬಿದ್ದ ಪರಿಣಾಮ ಕಾಸರಗೋಡು – ಮಂಗಳೂರು ಮಧ್ಯೆ ರೈಲು ಸಂಚಾರ ಮೊಟಕುಗೊಂಡಿದೆ. ಇಂದು ಬೆಳಿಗ್ಗೆ ಪಳ್ಳಿಕುನ್ನು ಎಂಬಲ್ಲಿ ಹೈಟೆನ್ಶನ್ ವಿದ್ಯುತ್ ತಂತಿ ಮೇಲೆ ತೆಂಗಿನ ಮರ ಬಿದ್ದಿದೆ. ಇದರಿಂದಾಗಿ ಹೈ ಟೆನ್ಶನ್ ಲೈನ್ ರೈಲ್ವೇ ಹಳಿಯ ಮೇಲೆ ಬಾಗಿ ನಿಂತಿದ್ದು, ಅಪಾಯ ಭೀತಿ ಎದುರಾಗಿದೆ. ವಿಷಯ ತಿಳಿದು ಮಂಗಳೂರಿಗೆ ತೆರಳುತ್ತಿದ್ದ ಮಲಬಾರ್ ಎಕ್ಸ್‌ಪ್ರೆಸ್ ರೈಲು ಗಾಡಿಯನ್ನು ಕಾಸರಗೋಡು ರೈಲ್ವೇ ನಿಲ್ದಾಣದಲ್ಲಿ  ನಿಲ್ಲಿಸಲಾಯಿತು. ಪ್ಯಾಸೆಂಜರ್ ರೈಲನ್ನು ತಳಗರೆಯಲ್ಲಿ ನಿಲ್ಲಿಸಿರುವುದಾಗಿ ತಿಳಿದು ಬಂದಿದೆ.

ಮಂಗಳೂರು ಭಾಗದಿಂದ ಕಾಸರಗೋಡಿಗೆ ರೈಲುಗಳ ಸಂಚಾರ ನಿಲುಗಡೆಗೊಳಿಸಲಾಗಿದೆ. ಇಂದು ಬೆಳಿಗ್ಗೆ 8.30ರ ವೇಳೆ ಬೀಸಿದ ಬಿರುಗಾಳಿಯಿಂದ ಈ ದುರ್ಘಟನೆ ಉಂಟಾಗಿದೆ. ವಿಷಯ ತಿಳಿದು ಪೊಲೀಸರು, ಅಗ್ನಿಶಾಮಕ ದಳ ಹಾಗೂ ರೈಲ್ವೇ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ಹೈಟೆನ್ಶನ್ ವಿದ್ಯುತ್ ಲೈನ್ ಮರು ಸ್ಥಾಪಿಸಲು ಹಾಗೂ ತೆಂಗಿನ ಮರವನ್ನು ಕಡಿದು ತೆಗೆಯುವ ಕ್ರಮ ಆರಂಭಿಸಲಾಗಿದೆ. ಈ ಕೆಲಸಗಳು ಪೂರ್ಣಗೊಂಡ ತಕ್ಷಣ ರೈಲು ಸಂಚಾರ ಪುನರಾರಂಭಿಸಲಿದೆ.

RELATED NEWS

You cannot copy contents of this page