ಲಾರಿ ಪಲ್ಟಿಯಾಗಿ ಹತ್ತು ಮಂದಿ ಸ್ಥಳದಲ್ಲೇ ಸಾವು: 13 ಜನರಿಗೆ ಗಂಭೀರ
ಉತ್ತರಕನ್ನಡ: ಲಾರಿ ಪಲ್ಟಿಯಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ಹತ್ತು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಯೆಲ್ಲಾಪುರ ತಾಲೂಕಿನ ಗುಳ್ಳಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಈ ಘಟನೆಯಲ್ಲಿ 13 ಮಂದಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆ ಯಲ್ಲಿ ದಾಖಲಿಸಲಾಗಿದೆ. ಅಪಘಾತ ಕ್ಕೀಡಾದ ಲಾರಿ ಸವಣೂರಿನಿಂದ ಕುಮಟಕ್ಕೆ ತರಕಾರಿ ಹೇರಿಕೊಂಡು ಹೋಗುತ್ತಿತ್ತು. ಲಾರಿಯಲ್ಲಿದ್ದವರು ಕುಮಟಾ ಸಂತೆ ಮಾರುಕಟ್ಟೆಗೆ ವ್ಯಾಪಾರಕ್ಕಾಗಿ ಹೋಗುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಲಾರಿ ಮಗುಚಿ ಬಿದ್ದಿದೆ. ಲಾರಿಯಲ್ಲಿ ಒಟ್ಟು ೨೮ ಮಂದಿ ಪ್ರಯಾಣಿಸುತ್ತಿದ್ದರು. ಇವರೆಲ್ಲಾ ಸವಣೂರು ತಾಲೂಕಿನವರಾಗಿದ್ದಾರೆ.
ಮೃತರನ್ನು ಫಯಾಜ್ ಇಮಾಮ್ ಸಾಬ್ ಜಮಖಂಡಿ (45), ವಾಸಿಮ್ ವಿರುಲಾ ಮುಡಗೇರಿ (35), ಇಜಾಸ್ ಮುಸ್ತಫಾ ಮುಲ್ಲ (20), ದಿಕ್ ಭಾಷಾ ಫೌರಸ್ (30), ಗುಲಾಮ್ ಉಸೇನ್ ಜವುಳಿ (40), ಇಮ್ತಿಯಾಸ್ ಮಮ ಜಾಫರ್ ಮುಳಕೇರಿ (35), ಅಲ್ಪಾಜ್ ಜಾಫರ್ ಮಂಡಕ್ಕಿ (೨೫), ಜಿಲಾನಿ ಅಬ್ದುಲ್ ಜಖಾತಿ (25) ಮತ್ತು ಅಸ್ಲಾಂ ಬಾಬು ಬೆಣ್ಣೆ (24) ಎಂದು ಗುರುತಿಸಲಾಗಿದೆಯೆಂದು ಈ ಬಗ್ಗೆ ತನಿಖೆ ನಡೆಸಿದ ಯೆಲ್ಲಾ ಪುರ ಪೊಲೀಸರು ತಿಳಿಸಿದ್ದಾರೆ. ಇದೇ ರೀತಿ ರಾಯಚೂರಿನಲ್ಲಿ ಸಿಂಧೂ ನಗರ ಮಂತ್ರಾಲಯ ಸಂಸ್ಕೃತ ಪೀಠದ ಕ್ರೂಸ್ ವಾಹನ ಪಲ್ಟಿ ಯಾಗಿ ಮೂವರು ವಿದ್ಯಾರ್ಥಿಗಳು ಹಾಗೂ ಚಾಲಕ ಮೃತಪಟ್ಟ ಘಟನೆ ಇನ್ನೊಂದೆಡೆ ನಡೆದಿದೆ. ಈ ವಾಹನದಲ್ಲಿ 14 ಮಂದಿ ಪ್ರಯಾಣಿಕರಿದ್ದರು. ವಿದ್ಯಾರ್ಥಿ ಗಳಾದ ಹಯವದನ (18), ಸುಜಯೇಂದ್ರ (22), ಅಭಿಲಾಷ್ (20) ಮತ್ತು ಚಾಲಕ ಕಂಸಾಲಿ ಶಿವ (20) ಎಂಬಿವರು ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.