ಲೋಕಸಭಾ ಚುನಾವಣೆ: ಕೆ.ಕೆ. ಶೈಲಜಾ ಕಾಸರಗೋಡಿಗಿಲ್ಲ: ಉಣ್ಣಿತ್ತಾನ್ ವಿರುದ್ಧ ಸ್ಪರ್ಧೆ ಬಗ್ಗೆ ಎಡರಂಗದಲ್ಲಿ ಚರ್ಚೆ ಸಕ್ರಿಯ
ಕಾಸರಗೋಡು: ಮಾಜಿ ಸಚಿವೆ ಹಾಗೂ ಶಾಸಕಿಯಾಗಿರುವ ಕೆ.ಕೆ. ಶೈಲಜಾ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿಲ್ಲವೆಂಬುದು ಖಚಿತವಾಗಿದೆ. ಶೈಲಜರನ್ನು ವಡಗರ, ಅಥವಾ ಕಣ್ಣೂರಿನಲ್ಲಿ ಸ್ಪರ್ಧಿಸುವಂತೆ ಪಕ್ಷದಲ್ಲಿ ನಡೆಯುತ್ತಿರುವ ಸಕ್ರಿಯ ಚರ್ಚೆಯಿಂದ ಕಾಸರಗೋಡಿನಲ್ಲಿ ಎಡರಂಗದಿಂದ ಸ್ಪರ್ಧಿಸುವವರು ಯಾರೆಂಬ ಬಗ್ಗೆ ಚರ್ಚೆ ಆರಂಭ ಗೊಂಡಿದೆ.
ಟಿ. ಗೋವಿಂದನ್ರ ಬಳಿಕ ಕಣ್ಣೂರು ಜಿಲ್ಲೆಯಿಂದಿರುವ ಯಾರು ಕೂಡಾ ಕಲ್ಯಾಶ್ಶೇರಿ, ಪಯ್ಯನ್ನೂರು ವಿಧಾನಸಭಾ ಮಂಡಲಗಳು ಸೇರಿರುವ ಕಾಸರಗೋಡು ಲೋಕಸಭಾ ಮಂಡಲದಲ್ಲಿ ಸ್ಪರ್ಧಿಸಿಲ್ಲ. ಆದುದರಿಂದ ಈ ಬಾರಿ ಕಣ್ಣೂರು ಜಿಲ್ಲೆಯ ಓರ್ವರನ್ನು ಸ್ಪರ್ಧೆಗಿಳಿಸಬೇಕೆಂಬ ಬೇಡಿಕೆ ತೀವ್ರವಾಗಿದೆ. ಈ ಬೇಡಿಕೆಗೆ ಅಂಗೀಕಾರ ಲಭಿಸಿದರೆ ಕಣ್ಣೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಪಿ. ದಿವ್ಯಾ, ಮಾಜಿ ಶಾಸಕ ಟಿ.ವಿ. ರಾಜೇಶ್ ಎಂಬವರಲ್ಲಿ ಓರ್ವರು ಅಭ್ಯರ್ಥಿ ಯಾಗುವರೆಂಬ ಸೂಚನೆ ಇದೆ.
ಆದರೆ ಸ್ಪರ್ಧಿ ಜಿಲ್ಲೆಯಿಂದಾದರೆ ಮೂರು ಮಂದಿಯ ಹೆಸರು ಪರಿಗಣನೆಯಲ್ಲಿದೆ. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ. ಬಾಲಕೃಷ್ಣನ್, ವಿ.ಪಿ.ಪಿ. ಮುಸ್ತಫ ಕಳೆದ ಬಾರಿ ರಾಜ್ಮೋಹನ್ ಉಣ್ಣಿತ್ತಾನ್ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ ಮಾಜಿ ಶಾಸಕ ಕೆ.ಪಿ. ಸತೀಶ್ಚಂದ್ರನ್ ಎಂಬಿವರು ಪರಿಗಣನೆಯಲ್ಲಿರುವರು. ಈ ಹೆಸರುಗಳಲ್ಲಿ ಅಂತಿಮ ಯಾದಿಗೆ ಯಾರು ತಲುಪುವರೆಂಬುದನ್ನು ಕಾರ್ಯಕರ್ತರು ಎದುರು ನೋಡುತ್ತಿದ್ದಾರೆ. ಏನೇ ಇದ್ದರೂ ಯಾವುದೇ ಬೆಲೆ ತೆತ್ತಾದರೂ ಮಂಡಲವನ್ನು ಮತ್ತೆ ಸೆಳೆಯಬೇಕೆಂಬ ನಿಲುವು ಪಕ್ಷ ಹಾಗೂ ಕಾರ್ಯಕರ್ತರಲ್ಲಿದೆ.
ಇದೇ ವೇಳೆ ಯುಡಿಎಫ್ನಿಂದ ಈ ಬಾರಿಯೂ ರಾಜ್ಮೋಹನ್ ಉಣ್ಣಿತ್ತಾನ್ರೇ ರಂಗಕ್ಕಿಳಿಯುವರೆಂದು ಸೂಚನೆ ಇದೆ. ಇದನ್ನು ಮುಂದಾಗಿ ಕಂಡುಕೊಂಡು ಉಣ್ಣಿತ್ತಾನ್ ಸಿದ್ಧರಾಗಿದ್ದಾರೆ. ಬಿಜೆಪಿಯಿಂದ ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು, ಪಿ.ಕೆ. ಕೃಷ್ಣದಾಸ್ರ ಹೆಸರು ಸಕ್ರಿಯವಾಗಿ ಪರಿಗಣನೆಯಲ್ಲಿದೆ.