ವಾಹನ ತಪಾಸಣೆ ವೇಳೆ ಕದ್ದ ಬೈಕ್ ಪತ್ತೆ
ಕಾಸರಗೋಡು: ವಾಹನ ತಪಾಸಣೆ ವೇಳೆ ಕದ್ದ ಬೈಕೊಂದನ್ನು ಕಾಸರಗೋಡು ಪೊಲೀಸರು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ನಂಬ್ರ ಪ್ಲೇಟ್, ಸೈಡ್ ಮಿರರ್ ಇತ್ಯಾದಿ ಗಳು ಇಲ್ಲದ ದ್ವಿಚಕ್ರ ವಾಹನಗಳ ಪತ್ತೆಗಾಗಿ ತಳಂಗರೆ ಪಳ್ಳಿಕ್ಕಾಲ್‌ನಲ್ಲಿ ಪೊಲೀಸರು ವಾಹನ ತಪಾಸಣೆಯಲ್ಲಿ ತೊಡಗಿದ್ದರು. ಆ ವೇಳೆ ಅಲ್ಲೇ ಪಕ್ಕದ ಬಸ್ ತಂಗುದಾಣದ ಬಳಿ ನಂಬ್ರ ಪ್ಲೇಟ್ ಇಲ್ಲದ ಫ್ಯಾಷನ್ ಪ್ಲಸ್ ಬೈಕೊಂದು ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದರ ಚೈಸೀಸ್ ನಂಬ್ರವನ್ನು ಪೊಲೀಸರು ಪರಿಶೀಲಿಸಿದಾಗ ಅದು ಕಳೆದ ಮೇ ೨ರಂದು ಉದುಮ ಬಾರ ಪೂಕುನ್ನತ್ತ್ ದೇವಸ್ಥಾನದ ಪರಿಸರದಿಂದ ಕಳವು ಹೋಗಿದ್ದ ಹೊಸದುರ್ಗ ವಳ್ಳಿಕ್ಕೋಡ್ ನಿವಾಸಿ ಅನೀಶ್ ಎಂಬವರ ಬೈಕ್ ಆಗಿರುವುದಾಗಿ ಪೊಲೀಸರು ಪತ್ತೆಹಚ್ಚಿದ್ದಾರೆ.
ಕಾಸರಗೋಡು ನಗರದಲ್ಲಿ ದ್ವಿಚಕ್ರ ವಾಹನಗಳ ಕಳವು ಇತ್ತೀಚೆಗೆ ಹೆಚ್ಚಾಗತೊಡಗಿದೆ. ರೈಲು ನಿಲ್ದಾಣ ಪರಿಸರದಲ್ಲಿ ನಿಲುಗಡೆಗೊಳಿಸಲಾ ಗುತ್ತಿರುವ ದ್ವಿಚಕ್ರ ವಾಹನಗಳನ್ನೇ ಹೆಚ್ಚಾಗಿ ಕಳವುಗೈಯ್ಯಲಾಗುತ್ತಿದೆ. ಹೀಗೆ ಕಳವುಗೈಯ್ಯಲಾಗುವ ವಾಹನಗಳ ನಂಬ್ರ ಪ್ಲೇಟ್‌ಗಳನ್ನು ಕಳಚಿ ತೆಗೆದು ಕೆಲವೊಮ್ಮೆ ಅವುಗಳಿಗೆ ನಕಲಿ ನಂಬ್ರ ಪ್ಲೇಟ್ ಅಳವಡಿಸಿ ಅವುಗಳನ್ನು ಮಾದಕದ್ರವ್ಯ ಸಾಗಾಟ, ಕಳವು, ದರೋಡೆ ಇತ್ಯಾದಿ ಅಕ್ರಮ ಕ್ಷೇತ್ರಗಳಿಗೂ ಬಳಸಲಾಗುತ್ತಿದೆ. ಇನ್ನು ಕೆಲವು ಕಳ್ಳರು ಕದ್ದ ವಾಹನಗಳ ಬಿಡಿ ಭಾಗಗಳನ್ನು ಕಳಚಿ ಮಾರಾಟ ಮಾಡುವವರೂ ಇದ್ದಾರೆಂದು ಪೊಲೀಸರು ಹೇಳುತ್ತಿದ್ದಾರೆ.