ವಿಮಾನ ನಿಲ್ದಾಣದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ : 3 ಕೋಟಿ ರೂ. ಮೌಲ್ಯದ ಮಾದಕದ್ರವ್ಯ ವಶ ; ಕಾಸರಗೋಡು ನಿವಾಸಿ ಸೆರೆ

ಕಾಸರಗೋಡು:  ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮೂರು ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿ ಮೊಹಮ್ಮದ್ ಶರೀಫ್ (25) ಎಂಬಾತನನ್ನು ಬಂಧಿಸಲಾಗಿದೆ.

ಈತ ವಿಮಾನದಲ್ಲಿ ಬ್ಯಾಂಕಾಕ್‌ನಿಂದ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದನು. ಕಸ್ಟಮ್ಸ್ ತಂಡ ಆತನ ಟ್ರೋಲಿ ಬ್ಯಾಗನ್ನು ತಪಾಸಣೆಗೊಳಪಡಿಸಿದಾಗ ಅದರೊಳಗೆ ಪ್ಲಾಸ್ಟಿಕ್ ಪ್ಯಾಕೆಟ್‌ನಲ್ಲಿ ತುಂಬಿಸಿ ಬಚ್ಚಿಡಲಾಗಿದ್ದ ಮಾದಕದ್ರವ್ಯ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಅದರಲ್ಲಿ 3.004 ಕಿಲೋ ಗ್ರಾಂ ಮಾದಕವಸ್ತು ಇತ್ತೆಂದೂ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ ಸುಮಾರು ಮೂರು ಕೋಟಿ ರೂ. ಬೆಲೆ ಇದೆ ಎಂದೂ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಪತ್ತೆಯಾದ ಮಾದಕ ದ್ರವ್ಯ ‘ಮಂಜುಜವಾನ’ ಎಂಬ ಹೆಸರಿನ ಮಾದಕ ದ್ರವ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಜಬ್ಬೀರ್ ಎಂ. ಎಂಬಾತನಿಗೆ ನೀಡಲೆಂದು ನಾನು ಈ ಮಾಲು ತಂದಿರುವುದಾಗಿಯೂ,  ಅದನ್ನು ನಿಗದಿತ ಗುರಿ ತಲುಪಿಸಿದಲ್ಲಿ ತನಗೆ ಹಣ ಲಭಿಸುತ್ತದೆ. ಅದಕ್ಕಾಗಿ ನಾನು ಈ ಮಾಲನ್ನು ತಂದಿರುವುದಾಗಿ ಬಂಧಿತನು ವಿಚಾರಣೆ ವೇಳೆ ಹೇಳಿಕೆ ನೀಡಿರುವುದಾಗಿ  ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಬ್ಯಾಂಕಾಕ್‌ನಲ್ಲಿ ಮೊಹಮ್ಮದ್ ಶರೀಫ್ ಬ್ಯಾಂಕಾಕ್‌ನಲ್ಲಿ ಅಕೌಂಟೆಂಟ್ ಆಗಿದ್ದು, ಅದರ ಜೊತೆಗೆ ರಿಯಲ್ ಎಸ್ಟೇಟ್ ಏಜೆಂಟನೂ ಆಗಿದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ.

You cannot copy contents of this page