ಮಂಜೇಶ್ವರ : ಮಂಜೇಶ್ವರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆತಂಕದಲ್ಲಿದ್ದಾರೆ. ಬೀದಿ ನಾಯಿಗಳು ಜನರ ಮೇಲೆ ದಾಳಿ ಮಾಡುವ ಭಯದಿಂದ, ಜನರು ತಮ್ಮ ಮನೆಗಳಿಂದ ಹೊರಗಿಳಿಯಲು ಹೆದರುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳು ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ತೂಮಿನಾಡಿನಲ್ಲಿ ಕರ್ನಾಟಕದಿಂದ ದ್ವಿಚಕ್ರ ವಾಹನದಲ್ಲಿ ಬಂದ ಪಿಗ್ಮಿ ಸಂಗ್ರಹಗಾರನಿಗೆ ನಾಯಿ ಕಚ್ಚಿ ಗಂಭೀರ ಗಾಯಗೊಳಿಸಿದೆ. ಬಳಿಕ ಸ್ಥಳೀಯರು ನಾಯಿಯಿಂದ ಬಿಡಿಸಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ ಘಟನೆ ನಡೆದಿದೆ.
ಇದಕ್ಕಿಂತ ಮೊದಲು ಕೂಡಾ ಇದೇ ಪರಿಸರದಲ್ಲಿ ನಾಯಿ ಹಿಂಡುಗಳು ಮದ್ರಸಕ್ಕೆ ಹೋಗುವ ವಿದ್ಯಾರ್ಥಿಗಳ ಮೇಲೆ ಎರಗಿವೆ. ಸಂಬAಧಪಟ್ಟವರು ಇತ್ತ ಕಡೆ ತಿರುಗಿಯೂ ನೋಡುವುದಿಲ್ಲವೆಂದು ಸ್ಥಳೀಯರು ಆರೋಪಿಸುತಿದ್ದಾರೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಹೆದ್ದಾರಿ ಸಹಿತ ಒಳರಸ್ತೆಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ವಾಹನ ಸವಾರರನ್ನು, ಪಾದಚಾರಿಗಳನ್ನು ಬೆನ್ನಟ್ಟುತ್ತಿದೆ.
