ವಿವಿಧೆಡೆ ಮುಸ್ಲಿಂ ಬಾಂಧವರಿಂದ ಈದ್ ಮಿಲಾದ್ ಆಚರಣೆ

ಮಂಜೇಶ್ವರ: ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಿದರು. ಹಲವೆಡೆಗಳಲ್ಲಿ ಮಸೀದಿ, ಮದ್ರಸ ಸಮಿತಿ ವತಿಯಿಂದ ಮೆರವಣಿಗೆಯನ್ನು ನಡೆಸಲಾಗಿದ್ದು, ಹಲವಾರು ಮಂದಿ ಭಾಗವಹಿಸಿದರು. ಉದ್ಯಾವರ ಸಾವಿರ ಜಮಾಯತ್ ವತಿಯಿಂದ ಆಯೋಜಿಸಿದ ಈದ್ ಮಿಲಾದ್ ಮೆರವಣಿಗೆಗೆ ಮಸೀದಿ ಅಧ್ಯಕ್ಷ ಸೈಫುಲ್ಲಾ ತಂಙಳ್, ಬಾವಾ ಹಾಜಿ, ಇಬ್ರಾಹಿಂ ಹಾಜಿ, ಇಬ್ರಾಹಿಂ, ಎಸ್.ಎಂ. ಬಶೀರ್, ಸಮಿತಿ ಸದಸ್ಯರು ನೇತೃತ್ವ ನೀಡಿದರು. ಮಸೀದಿಯ ಅಧೀನದದಲ್ಲಿರುವ ೧೩ ಮೊಹಲ್ಲಾಗಳ ಮದ್ರಸ ವಿದ್ಯಾರ್ಥಿಗಳು, ಅಧ್ಯಾಪಕರು, ಪೋಷಕರು ಪಾಲ್ಗೊಂಡರು.  ಮೆರವಣಿಗೆ ಕುಂಜತ್ತೂರು ವರೆಗೆ ಸಾಗಿ ಮಸೀದಿಗೆ ಹಿಂತಿರುಗಿತು. ತೂಮಿನಾಡು ಅಲ್ ಫತಾಹ ಜುಮಾ ಮಸೀದಿ ಹಾಗೂ ಸಿರಾಜುಲ್ ಇಸ್ಲಾಂ ಮದ್ರಸ ವತಿಯಿಂದ ನಡೆದ ಮೆರವಣಿಗೆಗೆ ಮಸೀದಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಎ.ಆರ್. ಕಾರ್ಯದರ್ಶಿ ಮೊಹಮ್ಮದ್ ಹಮೀಫ್, ಖತೀಬ್ ಅಬ್ದುಲ್ ರೌಫ್ ಇಸಾಮಿ, ಸಮಿತಿ ಸದಸ್ಯರು ನೇತೃತ್ವ ನೀಡಿದರು. ಪೊಸೋಟು ಮುಹಿಯುದ್ದೀನ್ ಜುಮಾ ಮಸೀದಿ, ಮುಂಬುಲ್ ಉಲುಮ್, ಮದ್ರಸ ವತಿಯಿಂದ ನಡೆದ ಮೆರವಣಿಗೆಗೆ ಮಸೀದಿ ಅಧ್ಯಕ್ಷ ಆರ್.ಕೆ. ಬಾವ, ಕಾರ್ಯದರ್ಶಿ ಕೆ.ಕೆ. ಮೊಯ್ದೀನ್ ಕುಂಞಿ ಹಾಜಿ, ಖತೀಬ್ ಶಬೀರ್ ಫೈಸಿ, ಸದಸ್ಯರು ನೇತೃತ್ವ ನೀಡಿದರು. ಉಪ್ಪಳ ಬದ್ರಿಯಾ ಮದ್ರಸ ಮೆನೇಜ್‌ಮೆಂಟ್, ಪದಾಧಿಕಾರಿಗಳು, ಹೆತ್ತವರು, ವಿದ್ಯಾರ್ಥಿಗಳು ರ‍್ಯಾಲಿ ನಡೆಸಿದ್ದು, ಖತೀಬ್ ಇಬ್ರಾಹಿಂ ಹನೀಫಿ, ಸದರ್ ಮುಹಲ್ಲಿಂ ಹನೀಫ್ ಮುಸ್ಲಿಯಾರ್, ಜಬ್ಬಾರ್ ಪಳ್ಳಂ, ರಿಯಾಲ್ ಕ್ಯಾಲಿಕೆಟ್ ನೇತೃತ್ವ ನೀಡಿದರು.

You cannot copy contents of this page