ವಿವಿಧೆಡೆಗಳಲ್ಲಿ ಬಯಲು ಪ್ರದೇಶ ಜಲಾವೃತ: ಅಪಾರ ಕೃಷಿ ನಾಶ
ಪೈವಳಿಕೆ: ಎಡೆಬಿಡದೆ ಸುರಿದ ವ್ಯಾಪಕ ಮಳೆಗೆ ವಿವಿಧ ಕಡೆಗಳ ಕೃಷಿ ಸಂಪೂರ್ಣ ನಾಶಗೊಂಡಿದ್ದು, ಕೃಷಿಕರು ಸಂಕಷ್ಟಕ್ಕೀಡಾಗಿದ್ದಾರೆ. ಪೈವಳಿಕೆ ಬಯಲು ಭತ್ತದ ಕೃಷಿಯಲ್ಲಿ ನೀರು ತುಂಬಿಕೊಂಡು ಒಂದು ತಿಂಗಳ ಪ್ರಾಯದ ಪೈರು ನಾಶವಾಗಿದ್ದು, ಕೂಡಲುಮೇರ್ಕಳದ ಕೂಡಲುಬಯಲು ಜಲಾವೃತಗೊಂಡು, ಕಂಗು ಕೃಷಿಗೆ ಹಾನಿ ಉಂಟಾಗಿದೆ. ಇಲ್ಲಿನ ನಾಗನಕಟ್ಟೆಗೆ ನೀರು ನುಗ್ಗಿದೆ. ಪೈವಳಿಕೆ ಬಯಲಿನ ವಿನೋದ್ ಬಾಯಾರು ಹಾಗೂ ಅಬ್ದುಲ್ ಹಾಜಿ ಎಂಬವರ ಹಲವಾರು ಎಕ್ರೆ ಭತ್ತದ ಕೃಷಿ ನೀರು ತುಂಬಿ ನಾಶಗೊಂಡಿದೆ. ಇದೇ ರೀತಿ ಕೂಡಲುಮೇರ್ಕಳದಲ್ಲಿ ಕಂಗಿನ ತೋಟದಲ್ಲಿ ನೀರು ತುಂಬಿಕೊಂಡು ಅಡಿಕೆ ಕೃಷಿಕೆ ಕೊಳೆರೋಗ ಕಂಡುಬಂದಿದೆ. ಬಯಲು ಪ್ರದೇಶದ ಬದಿಯ ತೋಡಿನ ಬದಿ ಒಡೆದು ಕೂಡಲುಮೇರ್ಕಳದಲ್ಲಿ ಬಯಲಿಗೆ ನೀರು ನುಗ್ಗಿದೆ. ಇದೇ ರೀತಿ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಶಿರಿಯಾ, ವಾನಂದೆ, ಮಂಗಲ್ಪಾಡಿ ಬಯಲುನಲ್ಲೂ ನೀರು ತುಂಬಿಕೊಂಡಿದೆ. ಉಪ್ಪಳ ಹೊಳೆಯ ಇಕ್ಕಡೆಗಳಲ್ಲಿರುವ ತೋಟಗಳಿಗೂ ನೀರು ನುಗ್ಗಿ ಕೃಷಿ ಹಾನಿಗೊಂಡಿದೆ. ಭತ್ತ ಹಾಗೂ ಅಡಿಕೆ ಕೃಷಿ ಹಾನಿಯಿಂದ ಕೃಷಿಕರು ಸಂಕಷ್ಟಕ್ಕೀಡಾಗಿದ್ದಾರೆ. ಇದರ ಪರಿಹಾರಕ್ಕೆ ತುರ್ತು ಕ್ರಮ ಅಗತ್ಯವೆಂದು ಸ್ಥಳೀಯರು ಆಗ್ರಹಿಸಿದ್ದಾರೆ.