ವ್ಯಾಪಕಗೊಂಡ ಆನ್ಲೈನ್ ವಂಚನೆ: ಎರಡು ದಿನಗಳಲ್ಲಾಗಿ ಜಿಲ್ಲೆಯಲ್ಲಿ ನಾಲ್ಕು ಕೇಸು ದಾಖಲು
ಕಾಸರಗೋಡು: ಆನ್ಲೈನ್ ಟ್ರೇಡಿಂಗ್ ಹಾಗೂ ಪಾರ್ಟ್ಟೈಮ್ ಉದ್ಯೋಗ ಎಂಬ ಹೆಸರಲ್ಲೂ ಹಣ ಲಪಟಾಯಿಸಲಾಗುತ್ತಿದೆ ಎಂಬ ದೂರಿನಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎರಡು ದಿನಗಳಲ್ಲಾಗಿ ನಾಲ್ಕು ಕೇಸುಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಕಾಸರಗೋಡು ತಳಂಗರೆ ನಿವಾಸಿಯ ೧೩ ಲಕ್ಷ ರೂಪಾಯಿ ಈ ರೀತಿಯಲ್ಲಿ ನಷ್ಟಗೊಂಡಿದೆ. ಮೂವಿ ಫ್ಲಾಟ್ಫಾಮ್ ಎಂಬ ಕಂಪೆನಿಯಲ್ಲಿ ಪಾರ್ಟ್ಟೈಮ್ ಉದ್ಯೋಗ ನೀಡುವ ಭರವಸೆಯೊಡ್ಡಿ ಹಣ ಲಪಟಾಯಿಸಲಾಗಿದೆ. ಚಟ್ಟಂಚಾಲ್ ತೆಕ್ಕಿಲ್ ನಿವಾಸಿಯ ೧.೩೦ ಲಕ್ಷ ರೂಪಾಯಿಗಳನ್ನು ಹೆಚ್ಚಿನ ಬಡ್ಡಿ ನೀಡುವುದಾಗಿ ವಾಟ್ಸಪ್ ಮೂಲಕ ಮಾಹಿತಿ ನೀಡಿ ಲಪಟಾಯಿಸಲಾಗಿದೆ ಎಂದು ದೂರಲಾಗಿದೆ. ಇದೇ ರೀತಿಯಲ್ಲೇ ಬೋವಿಕ್ಕಾನ ನಿವಾಸಿಯ ೧.೨೨ ಲಕ್ಷ ರೂಪಾಯಿ ನಷ್ಟಗೊಂಡಿದೆ. ವಾಟ್ಸಪ್, ಟೆಲಿಗ್ರಾಂ, ಆನ್ಲೈನ್ ಟ್ರೇಡಿಂಗ್ ಮೂಲಕ ಈ ಹಣವನ್ನು ಲಪಟಾಯಿಸಲಾಗಿದೆ. ಲಿಂಕ್ನಲ್ಲಿ ಕ್ಲಿಕ್ ಮಾಡುವುದರೊಂದಿಗೆ ಮಾಂಞಾಡ್ ಬಾರ ನಿವಾಸಿಯ ೯೯೯೯೯ ರೂಪಾಯಿ ನಷ್ಟಗೊಂಡಿದೆ. ವಂಚನೆಗಾರರು ಅವರಿಗೆ ನೀಡಿದ ಲಿಂಕ್ನಲ್ಲಿ ಕ್ಲಿಕ್ ಮಾಡಿ ಆಪ್ ಇನ್ಸ್ಟಾಲ್ ಮಾಡುವುದರೊಂದಿಗೆ ಹಣ ನಷ್ಟಗೊಂಡಿದೆ ಎಂದು ದೂರಲಾಗಿದೆ.