ಶಬರಿಮಲೆ, ಮಾಳಿಗಪುರಂ ಕ್ಷೇತ್ರ ಮುಖ್ಯ ಅರ್ಚಕರ ಆಯ್ಕೆ
ಪತ್ತನಂತಿಟ್ಟ: ಶಬರಿಮಲೆ ಕ್ಷೇತ್ರದ ನೂತನ ಮುಖ್ಯ ಅರ್ಚಕರಾಗಿ ಎಸ್. ಅರುಣ್ ಕುಮಾರ್ ನಂಬೂದಿರಿ, ಮಾಳಿಗಪುರಂ ಮುಖ್ಯ ಅರ್ಚಕರಾಗಿ ಕಲ್ಲಿಕೋಟೆ ಒಳವಣ್ಣ ತಿರುಮಂಗಲತ್ತ್ ಇಲ್ಲಂನ ಟಿ. ವಾಸುದೇನ್ ನಂಬೂದಿರಿ ಆಯ್ಕೆಗೊಂಡಿದ್ದಾರೆ. ಕೊಲ್ಲಂ ಶಕ್ತಿಕುಳಂಗರ ನಿವಾಸಿಯಾದ ಎಸ್. ಅರುಣ್ ಕುಮಾರ್ ನಂಬೂದಿರಿ ತಿರುವನಂತಪುರ ಆಟುಕ್ಕಾಲ್ ಕ್ಷೇತ್ರದ ಮಾಜಿ ಮುಖ್ಯ ಅರ್ಚಕರಾಗಿದ್ದಾರೆ. ಇವರು ಕೊಲ್ಲಂ ಲಕ್ಷ್ಮಿನಡ ಕ್ಷೇತ್ರದ ಮುಖ್ಯ ಅರ್ಚಕರಾಗಿದ್ದರು. ಶಬರಿಮಲೆ ಮುಖ್ಯ ಅರ್ಚಕರ ಯಾದಿಯಲ್ಲಿ ಇವರು ಆರು ಬಾರಿ ಒಳ ಗೊಂಡಿದ್ದರು. ಇಂದು ಬೆಳಿಗ್ಗೆ ಶಬರಿಮಲೆ ಸನ್ನಿಧಾನದಲ್ಲಿ ನೂತನ ಅರ್ಚಕರ ಆಯ್ಕೆಗಾಗಿ ಚೀಟಿ ಎತ್ತುವ ಕಾರ್ಯಕ್ರಮ ನಡೆದಿದೆ. ಶಬರಿಮಲೆ ಕ್ಷೇತ್ರಕ್ಕಿರುವ ಮುಖ್ಯ ಅರ್ಚಕರ ಆಯ್ಕೆಗಾಗಿ 24 ಮಂದಿ ಅಂತಿಮ ಯಾದಿಯಲ್ಲಿದ್ದರು. ಪಂದಳಂ ಅರಮನೆಯ ಋಷಿಕೇಶ್ ಹಾಗೂ ವೈಷ್ಣವಿ ಶಬರಿಮಲೆ ಹಾಗೂ ಮಾಳಿಗಪುರಂನ ಮುಖ್ಯ ಅರ್ಚಕರ ಆಯ್ಕೆಗಾಗಿ ಚೀಟಿ ಎತ್ತಿದ್ದಾರೆ.
ಮಾಳಿಗಪುರಂ ಮುಖ್ಯ ಅರ್ಚಕರ ಅಂತಿಮ ಯಾದಿಯಲ್ಲಿ 15 ಮಂದಿ ಇದ್ದರು. ತಂತ್ರಿಗಳಾದ ಕಂಠರ ರಾಜೀವರ್, ಕಂಠರ ಬ್ರಹ್ಮದತ್ತನ್, ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್, ಸದಸ್ಯರಾದ ಎ. ಅಜಿತ್ ಕುಮಾರ್, ಜಿ. ಸುಂದರೇಶನ್, ಸ್ಪೆಷಲ್ ಕಮಿಷನರ್ ಹಾಗೂ ಜಿಲ್ಲಾ ನ್ಯಾಯಾಧೀಶರಾದ ಆರ್. ಜಯಕೃಷ್ಣನ್ ಮೊದಲಾದವರ ಉಪಸ್ಥಿತಿಯಲ್ಲಿ ಮುಖ್ಯ ಅರ್ಚಕರ ಆಯ್ಕೆ ನಡೆದಿದೆ. ತುಲಾ ಮಾಸ ಪೂಜೆಗಳಿಗಾಗಿ ನಿನ್ನೆ ಸಂಜೆ ಶಬರಿಮಲೆ ಕ್ಷೇತ್ರ ಬಾಗಿಲು ತೆರೆಯಲಾಯಿತು. ೨೧ರಂದು ಮುಚ್ಚಲಾಗುವುದು. ಮಂಡಲಕಾಲದ ತೀರ್ಥಾಟನೆಗಾಗಿ ನವೆಂಬರ್ ೧೫ರಂದು ಕ್ಷೇತ್ರ ಬಾಗಿಲು ತೆರೆಯಲಿದ್ದು, ಅಂದಿನಿಂದ ಮುಖ್ಯ ಅರ್ಚಕರು ತಮ್ಮ ಹೊಣೆಗಾರಿಕೆ ವಹಿಸಿಕೊಳ್ಳಲಿದ್ದಾರೆ.