ಶೋಚನೀಯಗೊಂಡ ಬೀರಂತಬೈಲು ರಸ್ತೆ: ಸಂಚಾರ ಸಮಸ್ಯೆಯಿಂದ ಬಳಲುತ್ತಿರುವ ಸ್ಥಳೀಯರು
ಕಾಸರಗೋಡು: ನಗರಸಭೆಯ ೩೩ನೇ ವಾರ್ಡ್‌ನ ಬೀರಂತಬೈಲು ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದ್ದು ಸ್ಥಳೀಯರು ಸಂಕಷ್ಟಕ್ಕೀಡಾಗಿದ್ದಾರೆ. ಈ ರಸ್ತೆಯ ದುಸ್ಥಿತಿಯ ಬಗ್ಗೆ ವಾರ್ಡ್ ಕೌನ್ಸಿಲರ್ ವೀಣಾ ಅರುಣ್ ಶೆಟ್ಟಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ರಸ್ತೆ ಡಾಮರು ಕಿತ್ತು ಹೋಗಿ ಒಂದು ಸಮಸ್ಯೆಯಾದರೆ ಬದಿಯಲ್ಲಿ ಚರಂಡಿ ಇಲ್ಲದಿರುವುದು ಇನ್ನೊಂದು ಸಮಸ್ಯೆ. ಇದರ ಜೊತೆಯಲ್ಲಿ ಬೀರಂತಬೈಲಿಗೆ ಅಮೃತ್ ೨.೦ ಯೋಜನೆಯ ಕುಡಿಯುವ ನೀರು ವಿತರಣೆಗಾಗಿ ಪೈಪ್ ಹಾಕಲು ತೆಗೆದ ಹೊಂಡಗಳನ್ನು ಸರಿಯಾಗಿ ಮುಚ್ಚದಿರುವುದು ಇನ್ನೊಂದು ಸಮಸ್ಯೆ. ಇದೆಲ್ಲವುಗಳಿಂದಾಗಿ ಈ ರಸ್ತೆಯಲ್ಲಿ ಸಂಚಾರ ಸಮಸ್ಯೆ ತೀವ್ರಗೊಂಡಿದ್ದು, ದ್ವಿಚಕ್ರ ವಾಹನ ಸವಾರರು ಹೊಂಡಗಳಿಗೆ ಬಿದ್ದು ಕೈಕಾಲು ಮುರಿದುಕೊಂಡ ಘಟನೆಗಳು ನಡೆದಿವೆ. ರಿಕ್ಷಾ ಚಾಲಕರು ಈ ರಸ್ತೆಯಲ್ಲಿ ಪ್ರಯಾಣಿಸಲು ಒಪ್ಪದ ಕಾರಣ ವೃದ್ಧರು, ಶಾಲಾ ಮಕ್ಕಳ ಸಂಚಾರ ಸಮಸ್ಯೆಯಾಗಿದೆ.
ಕಳೆದ ಒಂದೂವರೆ ವರ್ಷದ ಹಿಂದೆ ಆರಂಭಿಸಿದ ಅಮೃತ್ ಕುಡಿಯುವ ನೀರು ಯೋಜನೆ ಇನ್ನೂ ಪೂರ್ಣಗೊಂಡಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ. ಒಂದೆಡೆ ನೀರು ವಿತರಣೆಗೊಳ್ಳದಿರುವುದು ಇನ್ನೊಂದೆಡೆ ಮಳೆಗಾಲದಲ್ಲಿ ರಸ್ತೆಯಲ್ಲೇ ನೀರು ತುಂಬಿಕೊಂಡಿರುವುದು ಇಲ್ಲಿನವರ ಸಮಸ್ಯೆಯಾಗಿದೆ. ಈ ಬಗ್ಗೆ ವಾರ್ಡ್ ಪ್ರತಿನಿಧಿ ಜಿಲ್ಲಾಧಿಕಾರಿಗೆ ದೂರು ನೀಡಿ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ.