ಸಂಚರಿಸುತ್ತಿದ್ದ ಬೈಕ್‌ನ ಮೇಲೆ ಕಾಡುಹಂದಿ ದಾಳಿ: ಮಸೀದಿ ಖತೀಬ್‌ರಿಗೆ ಗಂಭೀರ ಗಾಯ

ಕುಂಬಳೆ: ಸಂಚರಿಸುತ್ತಿದ್ದ ಬೈಕ್‌ನ ಮೇಲೆ ಕಾಡು ಹಂದಿಗಳು ದಾಳಿ ನಡೆಸಿದ್ದು, ಇದರಿಂದ ಸವಾರ  ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಆಲಂಪಾಡಿ ನಿವಾಸಿಯೂ, ಅಂಗಡಿಮೊಗರು ಕಂಬಾರ್ ಜುಮಾ ಮಸೀದಿಯ ಖತೀಬ್ ಆಗಿರುವ ಅಬ್ದುಲ್ ಸಲಾಂ ಇರ್ಫಾನಿ (40) ಎಂಬವರು ಗಾಯಗೊಂಡಿದ್ದು, ಇವರನ್ನು ಮಂಗಳೂರಿನ  ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ ಸುಮಾರು ೫ ಗಂಟೆ ವೇಳೆ ಕಟ್ಟತ್ತಡ್ಕ ಎ.ಕೆ.ಜಿ ನಗರದಲ್ಲಿ ಈ ಘಟನೆ ನಡೆದಿದೆ.

ಅಬ್ದುಲ್ ಇರ್ಫಾನಿ ಬೈಕ್‌ನಲ್ಲಿ ಮನೆಯಿಂದ ಮುಂಜಾನೆ ವೇಳೆ ಮಸೀದಿಗೆ ತೆರಳುತ್ತಿದ್ದರು. ಬೈಕ್ ಎ.ಕೆ.ಜಿ ನಗರಕ್ಕೆ ತಲುಪಿದಾಗ ಕಾಡು  ಹಂದಿಗಳ ಹಿಂಡು ಬೈಕ್‌ನ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಇದರಿಂದ ಗಾಯಗೊಂಡ ಖತೀಬ್‌ರ ಬೊಬ್ಬೆ ಕೇಳಿ ತಲುಪಿದ ಸ್ಥಳೀಯರು ಅವರನ್ನು  ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಕಾಡು ಹಂದಿಗಳ ಉಪಟಳ ತೀವ್ರಗೊಂಡಿರುವುದಾಗಿ ನಾಗರಿಕರು ತಿಳಿಸುತ್ತಿದ್ದಾರೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಡುಹಂದಿಗಳ ದಾಳಿಯಿಂದ ಹಲವರು ವಾಹನ ಪ್ರಯಾಣಿಕರು ಗಾಯಗೊಂಡ ಘಟನೆ ಈಗಾಗಲೇ ನಡೆದಿದೆ.

You cannot copy contents of this page