ಸಂಸ್ಕೃತ ಅಧ್ಯಾಪಕರಿಂದ ಉಪಜಿಲ್ಲಾ ವಿದ್ಯಾಧಿಕಾರಿಗೆ ಪ್ರತಿಭಟನಾ ಮನವಿ ಸಲ್ಲಿಕೆ
ಉಪ್ಪಳ: ಸಂಸ್ಕೃತದ ಅಭಿವೃದ್ಧಿಗೆ, ಪ್ರಚಾರಕ್ಕೆ ಹಾಗೂ ಪ್ರೋತ್ಸಾಹಕ್ಕಾಗಿ ಕೊಡಲ್ಪಡುವ ಎಲ್ಪಿ, ಯುಪಿ ವಿಭಾಗದ ಸಂಸ್ಕೃತ ಸ್ಕಾಲರ್ಶಿಪ್ ಇದುವರೆಗೂ ವಿತರಿಸಲಿಲ್ಲವೆಂದು ಕೇರಳ ಸಂಸ್ಕೃತ ಅಧ್ಯಾಪಕ ಫೆಡರೇಶನ್ ರಾಜ್ಯ ಸಮಿತಿ ದೂರಿದೆ. ಕೇರಳ ಸರಕಾರದ ಈ ಧೋರಣೆಯನ್ನು ಸಂಘಟನೆಯ ಮಂಜೇಶ್ವರ ಉಪಜಿಲ್ಲಾ ಘಟಕ ಖಂಡಿಸಿದ್ದು, ಸಂಘಟನೆಯ ವತಿಯಿಂದ ಉಪಜಿಲ್ಲಾ ವಿದ್ಯಾಧಿಕಾರಿಗೆ ಪ್ರತಿಭಟನಾ ಮನವಿ ಸಲ್ಲಿಸಲಾಯಿತು. ತಂಡದಲ್ಲಿ ರಾಜ್ಯ ಸಮಿತಿ ಸದಸ್ಯ ಮಧು ಮಾಸ್ತರ್, ಜಿಲ್ಲಾ ಸಮಿತಿ ಸದಸ್ಯರಾದ ಕೃಷ್ಣ ಪ್ರಸಾದ್, ಪ್ರಸೀದ, ಉಪಜಿಲ್ಲಾ ಪದಾಧಿಕಾರಿಗಳಾದ ಮಹೇಶ್ ಕೃಷ್ಣ ತೇಜಸ್ವಿ, ಶ್ರೀಲಕ್ಷ್ಮಿ, ಶ್ರೀಜಾಕ್ಷಿ, ಪ್ರಮೀಳ ಭಾಗವಹಿಸಿದರು.