ಸಾಕ್ಷಿದಾರನಿಗೆ ಬೆದರಿಕೆ ಪ್ರಕರಣ: ಆರೋಪಿ ಸೆರೆ
ಕಾಸರಗೋಡು: ಸಾಕ್ಷಿದಾರನಿಗೆ ಬೆದರಿಕೆಯೊಡ್ಡಿದ ಪ್ರಕರಣದ ಆರೋಪಿಯನ್ನು ವಿದ್ಯಾನಗರ ಪೊಲೀಸ್ ಠಾಣೆಯ ಎಸ್‌ಐ ವಿಷ್ಣುಪ್ರಸಾದ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಉಳಿಯತ್ತಡ್ಕ ಪಳ್ಳ ರಸ್ತೆ ಬಳಿಯ ಉಸ್ಮಾನ್ ಕೆ. ಅಲಿಯಾಸ್ ಚಾರ್ಲಿ ಉಸ್ಮಾನ್ (೪೨) ಬಂಧಿತ ಆರೋಪಿ.
ಖಾಸಗಿ ಬಸ್ ಸಿಬಬಂದಿಯಾಗಿರುವ ಪಾಡಿ ಎದುರ್ತೋಡು ನಿವಾಸಿ ನವೀನ್ ಕುಮಾರ್ (೨೪) ಎಂಬಾತನಿಗೆ ೨೪ರಂದು ಉಳಿಯತ್ತಡ್ಕದಲ್ಲಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಚಾರ್ಲಿ ಉಸ್ಮಾನ್‌ನನ್ನು ಬಂಧಿಸಲಾಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ. ೨೦೧೯ರಲ್ಲಿ ದೂರಗಾರ ನವೀನ್ ಕುಮಾರ್‌ನ ೫೦೦೦ ರೂ. ಒಳಗೊಂಡ ಪರ್ಸ್‌ನ್ನು ಆತನ ಕೈಯಿಂದ ಕಿತ್ತೆಸೆದು ಹಲ್ಲೆ ನಡೆಸಲಾಗಿತ್ತು. ಆ ಬಗ್ಗೆ ಅಂದು ನವೀನ್ ಕುಮಾರ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿ ಉಳಿಯತ್ತಡ್ಕದ ಚಾರ್ಲಿಸತ್ತಾರ್ ಸೇರಿದಂತೆ ಇಬ್ಬರ ವಿರುದ್ಧ ಪೊಲೀಸರು ಅಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆ ಪ್ರಕರಣದ ವಿಚಾರಣೆ ಈಗ ಕಾಸರಗೋಡು ಹೆಚ್ಚುವರಿ ಜಿಲ್ಲಾಸೆಶನ್ಸ್ ನ್ಯಾಯಾಲಯ (೨)ದಲ್ಲಿ ನಡೆಯುತ್ತಿದೆ. ಆ ಪ್ರಕರಣದ ಆರೋಪಿ ಚಾರ್ಲಿ ಸತ್ತಾರ್, ಚಾರ್ಲಿ ಉಸ್ಮಾನ್‌ನ ಸಹೋದರನಾಗಿದ್ದಾನೆ. ಈ ಮಧ್ಯೆ ಕಳೆದ ದಶಂಬರ್ ೨೪ರಂದು ತನ್ನ ಸಹೋದರನ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿಕೆ ನೀಡಬಾರದೆಂದು ಹೇಳಿ ನವೀನ್ ಕುಮಾರ್‌ನಿಗೆ ಚಾರ್ಲಿ ಉಸ್ಮಾನ್ ಬೆದರಿಕೆಯೊಡ್ಡಿದ್ದನೆಂದು ಆರೋಪಿಸಲಾಗಿದೆ. ಅದಕ್ಕೆ ಸಂಬಂಧಿಸಿ ನ್ಯಾಯಾಲಯ ನೀಡಿದ ನಿರ್ದೇಶ ಪ್ರಕಾರ ವಿದ್ಯಾನಗರ ಪೊಲೀಸರು ಚಾರ್ಲಿ ಉಸ್ಮಾನ್ ವಿರುದ್ಧ ಪ್ರಕರಣ ದಾಖಲಿಸಿಕೊ ಂಡಿದ್ದರು. ಆ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.